ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552
ಚಿತ್ರದುರ್ಗ: ಕೊಳಚೆ ನಿರ್ಮೂಲನಾ ಮಂಡಳಿ ಸೇರಿ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೊಂದಾಯಿಸುವ ಪ್ರಕ್ರಿಯೆಯನ್ನು ಕೈಬಿಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಿ.ಐ.ಟಿ.ಯು.ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಕಾರ್ಮಿಕ ಸಚಿವರ ಫೋಟೋ ದಹಿಸಲಾಯಿತು.
ಯೂನಿಯನ್ ಪಾರ್ಕಿನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಕಳಪೆ ಕಿಟ್‍ಗಳನ್ನು ಪ್ರದರ್ಶಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಮಿಕರು ಜಿಲ್ಲಾಡಳಿತದ ಮೂಲಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿ.ಐ.ಟಿ.ಯು.ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‍ಪೀರ್ ಕಾರ್ಮಿಕರಿಗೆ ಕಳಪೆ ಕಿಟ್‍ಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ಕೂಡಲೆ ವಿವಿಧ ಬಗೆಯ ಖರೀಧಿಗಳನ್ನು ನಿಲ್ಲಿಸಬೇಕು. ಕಟ್ಟಡ ಕಾರ್ಮಿಕರಿಗೆ ಸಾಲಕ್ಕೆ ಬದಲು ಮನೆ ನಿರ್ಮಿಸಿಕೊಳ್ಳಲು ಐದು ಲಕ್ಷ ರೂ.ಸಹಾಯಧನ ನೀಡಬೇಕು. ಸಹಾಯಕ/ಸಹಾಯಕಿಯರು, ವೆಲ್ಡರ್‍ಗಳಿಗೆ ನೇರವಾಗಿ ನಗದು ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮ ಮಾಡಬೇಕು. ಪೇಂಟರ್ ಕಿಟ್‍ಗಳನ್ನು ನೀಡುತ್ತಿರುವ ಜೊತೆಗೆ ಲಪ್ಪ ಕಲಿಸುವ ಮೆಷಿನ್ ಅಲ್ಯುಮಿನಿಯಂ ಸ್ಟಿಕ್ ಹಾಗೂ ಸ್ಟ್ಯಾಂಡ್ ವಿತರಿಸಬೇಕು ಎಂದು ಒತ್ತಾಯಿಸಿದರು.
ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್, ಬೂಸ್ಟ್‍ರ್ ಕಿಟ್ ಖರೀಧಿಯಲ್ಲಿ ಅಕ್ರಮ ನಡೆದಿದ್ದು, ಕಾರ್ಮಿಕ ಸಚಿವರಿಗೆ ಕಟ್ಟಡ ಕಾರ್ಮಿಕರ ಹಣವೇ ಬೇಕಾಗಿತ್ತ. ದೊಡ್ಡ ದೊಡ್ಡ ಉದ್ಯಮಿಗಳ ಹಣ ನುಂಗಲಿ. ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿಯಮಾವಳಿ, ಸುಪ್ರೀಂಕೋರ್ಟ್ ನಿರ್ದೇಶನ ಪಾಲಿಸದಿರುವುದನ್ನು ವಿರೋಧಿಸಿ ಸಾಕಷ್ಟು ಪ್ರತಿಭಟನೆ ನಡೆಸಿದ್ದೇವೆ. ಆದರೂ ಮಂಡಳಿ ನಿರಂತರ ಖರೀಧಿಯಲ್ಲಿ ತೊಡಗಿದೆ ಎಂದು ಕಳಪೆ ಕಿಟ್‍ಗಳನ್ನು ಪ್ರದರ್ಶಿಸಿದ ಸಿ.ಕೆ.ಗೌಸ್‍ಪೀರ್ ಮಂಡಳಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಖಾಲಿಯಿರುವ ಅನೇಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ಖಾಯಂಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಬಿ.ಸಿ.ನಾಗರಾಜಚಾರಿ, ಉಮೇಶ್, ಸಣ್ಣಮ್ಮ, ಮಹಮದ್ ಜಿಕ್ರಿಯಾವುಲ್ಲಾ, ಭಾಸ್ಕರಾಚಾರಿ, ಅಬ್ದುಲ್ಲಾ, ಮಂಜುನಾಥ್, ರಾಘವೇಂದ್ರ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.