ಚಿತ್ರದುರ್ಗ, (ಡಿಸೆಂಬರ್.03) : ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಶತಮಾನೋತ್ಸವ ಆಚರಣೆ ಅಂಗವಾಗಿ ಕೋವಿಡ್‍ನಿಂದ ನೊಂದ ಕುಟುಂಬಗಳಿಗೆ ಉಚಿತ ಹೊಲಿಗೆ ಯಂತ್ರಗಳು ಹಾಗೂ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.
ನಗರದ ಎಪಿಎಂಸಿ ಯಾರ್ಡ್ “ಎ” ಬ್ಲಾಕ್‍ನಲ್ಲಿರುವ ಎಸ್.ರಾಮರೆಡ್ಡಿ ಬಿ.ಎಂ.ಶಿವಮೂರ್ತಪ್ಪ ದಲ್ಲಾಲರ ಅಂಗಡಿ ಆವರಣದಲ್ಲಿ ಶುಕ್ರವಾರ ಉಚಿತ ಹೊಲಿಗೆ ಯಂತ್ರ ಹಾಗೂ ದಿನಸಿ ಕಿಟ್ ವಿತರಣೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷರಾದ ಕವಿತಾ ಎಸ್.ಮನ್ನಿಕೇರಿ, ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಉಳ್ಳವರಿಗೂ ಹಾಗೂ ಉಳ್ಳದಿಲ್ಲದವರಿಗೂ ಜೀವನ ಪಾಠ ಕಲಿಸಿದೆ. ಕೋವಿಡ್-19ರಿಂದ ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಬಹಳಷ್ಟು ಜನರು ಉತ್ತಮವಾಗಿ ಕೆಲಸನಿರ್ವಹಿಸಿ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದಾರೆ. ಅದೇ ರೀತಿಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯು ರಕ್ತದಾನ ಶಿಬಿರ, ಆಹಾರ ಕಿಟ್‍ಗಳ ವಿತರಣೆ ಮಾಡಿದ್ದಾರೆ. ಜೊತೆಗೆ ಎಷ್ಟೋ ಜೀವಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯು ಕೋವಿಡ್-19ರ ಸಂದರ್ಭದಲ್ಲಿ ಸಲ್ಲಿಸಿದ ಸೇವಾ ಮನೋಭಾವವನ್ನು ಪರಿಗಣಿಸಿ ಈಚೆಗೆ ರಾಜ್ಯಪಾಲರು ಪ್ರಶಸ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.
ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಿರಿ: ಆರೋಗ್ಯದ ಹಿತದೃಷ್ಠಿಯಿಂದ ಅರ್ಹರೆಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ ಮಾಡಿದರು.
ಕೋವಿಡ್ ಸೋಂಕಿನಿಂದ ರಕ್ಷಣೆ ಹಾಗೂ ಮೂರನೇ ಅಲೆ ಹಾಗೂ ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊದಲ ಮತ್ತು ಎರಡನೇ ಅಲೆಯಲ್ಲಿ ಲಾಕ್‍ಡೌನ್ ಸಂದರ್ಭದಲ್ಲಿ ಅತ್ಯಗತ್ಯ ಸೇವೆ ಒದಗಿಸಲು ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾಡಳಿತದೊಂದಿಗೆ ನೆರವಾಗಿದೆ. ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆಯು ದಿನಸಿ ಕಿಟ್ ವಿತರಣೆ, ಜನಜಂಗುಳಿ ಪ್ರದೇಶದಲ್ಲಿ ಕೋವಿಡ್-19ರ ಕುರಿತು ಜಾಗೃತಿ ಮೂಡಿಸಲಾಗಿದ್ದು, ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ರೆಡ್‍ಕ್ರಾಸ್ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವಾ ಮನೋಭಾವದೊಂದಿಗೆ ಉತ್ತಮ ಕಾರ್ಯಗಳನ್ನು ನಿರ್ವಹಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಆಡಳಿತ ಮಂಡಳಿ ಸದಸ್ಯರಾದ ಗಾಯತ್ರಿ ಶಿವರಾಮ್ ಮಾತನಾಡಿ, ರೆಡ್‍ಕ್ರಾಸ್ ಸಂಸ್ಥೆಯು 192 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಶತಮಾನೋತ್ಸವ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ ಎಂದರು.
ಭಾರತೀಯ ರೆಡ್‍ಕ್ರಾಸ್ ಜಿಲ್ಲಾ ಶಾಖೆ ವತಿಯಿಂದ ಕೋವಿಡ್-19 ಸಂದರ್ಭದಲ್ಲಿ 108 ದಿನಗಳ ಕಾಲ ಜಿಲ್ಲಾಸ್ಪತ್ರೆಯಲ್ಲಿ ಆಹಾರ ವಿತರಣೆ ಮಾಡಿ, ಕೋವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗಿದೆ. ಕೋವಿಡ್‍ನಿಂದ ಕೆಲಸ ಕಳೆದುಕೊಂಡವರ ಕುಟುಂಬಸ್ಥರ ಕುಟುಂಬದ ನಿರ್ವಹಣೆಗಾಗಿ ಸಹಾಯ ಮಾಡಲಿಕ್ಕಾಗಿ ರಾಜ್ಯಮಟ್ಟದ ಹಲವಾರು ಸಂಘ ಸಂಸ್ಥೆಳಿಗೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಸ್ಪಂದಿಸಿದ ಮೈಕ್ರೋ ಫೋಕಸ್ ಸಂಸ್ಥೆಯವರು ರೂ.2 ಕೋಟಿಗಳ ಅನುದಾನ ನೀಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಲಿಗೆ ಯಂತ್ರ ಹಾಗೂ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕ್ಯಾನ್ಸರ್ ಜಾಗೃತಿ ಮೂಡಿಸಲು ಕಿದ್ವಾಯಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಡಿಸೆಂಬರ್ ಹಾಗೂ ಜನವರಿ ಮಾಹೆಯಲ್ಲಿ ಕಿದ್ವಾಯಿ ಸಂಸ್ಥೆ ವತಿಯಿಂದ ಮೊಬೈಲ್ ವ್ಯಾನ್ ಬರಲಿದ್ದು, ಕ್ಯಾನ್ಸರ್‍ಅನ್ನು ಉಚಿತವಾಗಿ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾಶಾಖೆಯ ಕಾರ್ಯನಿರ್ವಹಣೆಗಾಗಿ ಜಿಲ್ಲಾ ಕೇಂದ್ರದಲ್ಲಿ ಜಾಗದ ವ್ಯವಸ್ಥೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ದಲ್ಲಾಲರ ಸಂಘದ ಅಧ್ಯಕ್ಷರು ಹಾಗೂ ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಪಾಧ್ಯಕ್ಷರಾದ ಎಸ್.ವೀರೇಶ್, ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ, ಖಜಾಂಚಿ ಈ.ಅರುಣ್‍ಕುಮಾರ್, ನಿರ್ದೇಶಕರಾದ ಶ್ರೀನಿವಾಸ್, ಮಧುಪ್ರಸಾದ್, ಸದಸ್ಯರಾದ ಮಹಮದ್ ಆಲಿ, ಸುರೇಶ್ ಭಾಪ್ನಾ, ಶಿವರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.