ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್. 13 : ಶಿಕ್ಷಣವೇ ಎಲ್ಲದಕ್ಕೂ ಮೂಲ ಶಕ್ತಿ. ಜೀವನದಲ್ಲಿ ಏನಾದರು ಬದಲಾವಣೆ ಕಂಡುಕೊಳ್ಳಬೇಕಾದರೆ ಮೊದಲು ಶಿಕ್ಷಣವಂತರಾಗಿ ಎಂದು ಬ್ರಹ್ಮವಿದ್ಯಾನಗರ ಭಗೀರಥಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿರುವ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳಿಗೆ ಬ್ಯಾಗ್, ಸಮವಸ್ತ್ರ ಹಾಗೂ ಸ್ವಟರ್ಗಳನ್ನು ವಿತರಿಸಿ ಮಾತನಾಡಿದರು.
ಗ್ರಾಮೀಣ ರಾಷ್ಟ್ರೀಯ ಸಾಕ್ಷರತಾ ಮಿಷನ್ ವತಿಯಿಂದ ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳಿಗೆ ಕಳೆದ ವರ್ಷ ಬ್ಯಾಗ್, ಸ್ವಟರ್ಗಳನ್ನು ವಿತರಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿನ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಈ ರೀತಿಯ ನೆರವು ನೀಡಿದಾಗ ಶಿಕ್ಷಣಕ್ಕೆ ಪ್ರೋತ್ಸಾಹಿಸಿದಂತಾಗುತ್ತದೆ. ಸರ್ಕಾರ ಕೂಡ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ನೀಡುತ್ತಿರುವುದರ ಜೊತೆ ಸಂಘ ಸಂಸ್ಥೆಗಳ ಸಹಾಯವು ಮುಖ್ಯ. ಭಾರತ ದೇಶ ಅನೇಕ ಜಾತಿ, ಧರ್ಮಗಳಿಂದ ಕೂಡಿದೆ. ಎಲ್ಲರೂ ಸಹೋದರರಂತೆ ಸಹಬಾಳ್ವೆಯಿಂದ ಬದುಕಬೇಕು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದರು.
ಕಠಿಣ ಪರಿಶ್ರಮ ಹಾಗೂ ಶ್ರದ್ದೆಯಿಂದ ವಿದ್ಯೆ ಕಲಿತಾಗ ಜೀವನದಲ್ಲಿ ದೊಡ್ಡ ಅಧಿಕಾರಿಗಳಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆಸ್ತಿಯನ್ನು ಭಾಗ ಮಾಡಬಹುದು. ವಿದ್ಯೆಯನ್ನು ಯಾರು ಪಾಲು ಮಾಡಲು ಆಗುವುದಿಲ್ಲ. ಸಂಪತ್ತು ಬಳಸಿದಷ್ಟು ಕರಗುತ್ತದೆ. ಅದೆ ವಿದ್ಯೆಯನ್ನು ಹಂಚಿದಷ್ಟು ಜಾಸ್ತಿಯಾಗುತ್ತದೆ. ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ತಂದೆ, ತಾಯಿ, ಗುರು-ಹಿರಿಯರಿಗೆ ಕೀರ್ತಿ ತರುವಂತಾಗಬೇಕೆಂದು ಮಕ್ಕಳಿಗೆ ತಿಳಿಸಿದರು.
ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿ ಮಾತನಾಡಿ ಸ್ವಾಮಿಗಳೆಂದರೆ ಭಕ್ತರಿಂದ ಕಾಣಿಕೆ ಪಡೆಯುವುದಷ್ಟಕ್ಕೆ ಮೀಸಲಲ್ಲ. ಸಾರ್ವಜನಿಕ ಸೇವೆಯಲ್ಲಿಯೂ ತೊಡಗಿರುತ್ತಾರೆನ್ನುವುದಕ್ಕೆ ಇದೊಂದು ಸಾಕ್ಷಿ. ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ವಟರ್, ಬ್ಯಾಗ್, ಸಮವಸ್ತ್ರ ನೀಡುತ್ತಿರುವುದು ದೊಡ್ಡ ಸೇವೆಯಿದ್ದಂತೆ. ಸರ್ಕಾರಿ ಶಾಲೆಯ ಮಕ್ಕಳು ಇಂತಹ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾವಂತರಾಗಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡುತ್ತ ಪುರುಷೋತ್ತಮಾನಂದಪುರಿ ಹಾಗೂ ಶಿವಲಿಂಗಾನಂದ ಸ್ವಾಮಿಗಳು ಜಾತ್ಯಾತೀತರಾಗಿದ್ದಾರೆ. ಇಂತಹವರ ನಡುವೆ ನಾವುಗಳಿರುವುದು ಪುಣ್ಯ. ದೇಶಕ್ಕೆ ಸ್ವಾಮೀಜಿಗಳ ಅವಶ್ಯಕತೆಯಿದೆ. ಉರ್ದು ಶಾಲೆಯ ಮಕ್ಕಳಿಗೆ ಸ್ವಟರ್, ಬ್ಯಾಗ್ ಸಮವಸ್ತ್ರಗಳನ್ನು ನೀಡುತ್ತಿರುವುದು ನಮಗೆ ಅತ್ಯಂತ ಖುಷಿಯಾಗಿದೆ ಎಂದು ನುಡಿದರು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೈಯದ್ ಇಸ್ಮಾಯಿಲ್ ಮಾತನಾಡಿ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ವಾಮೀಜಿಗಳು ಸ್ವಟರ್, ಬ್ಯಾಗ್, ಪಠ್ಯಪುಸ್ತಕಗಳನ್ನು ವಿತರಿಸುತ್ತಿರುವುದು ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗಿದೆ. ಸರ್ಕಾರ ಮಧ್ಯಾಹ್ನದ ಬಿಸಿಯೂಟ, ಪಠ್ಯಪುಸ್ತಕ, ಶೂ, ಸಾಕ್ಸ್ ಹೀಗೆ ಅನೇಕ ಪರಿಕರಗಳನ್ನು ನೀಡುತ್ತಿದೆ. ಎಲ್ಲವನ್ನು ಬಳಸಿಕೊಂಡು ವಿದ್ಯಾವಂತರಾಗುವುದರ ಜೊತೆಗೆ ಸಂಸ್ಕಾರವನ್ನು ಕಲಿಯಿರಿ ಎಂದು ಮಕ್ಕಳಿಗೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎ.ಸಾಧಿಕ್ವುಲ್ಲಾ ಮಾತನಾಡುತ್ತ ನಾನು ಕೂಡ ಇದೆ ಶಾಲೆಯಲ್ಲಿ ಓದಿದ್ದರಿಂದ ಈ ಶಾಲೆಯ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಮಕ್ಕಳೆ ದೇಶದ ಮುಂದಿನ ಪ್ರಜೆಗಳು. ಚೆನ್ನಾಗಿ ಓದಿ ಗುರು-ಹಿರಿಯರು ಹಾಗೂ ಪೋಷಕರುಗಳಿಗೆ ಕೀರ್ತಿ ತರುವಂತಾಗಿ ಎಂದು ಹಾರೈಸಿದರು.
ಬಿ.ಆರ್.ಸಿ. ಸಂಪತ್ಕುಮಾರ್ ಮಾತನಾಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ 27 ಸಾವಿರ ಮಕ್ಕಳಿದ್ದಾರೆ. ಸ್ವಾಮಿಜಿಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ವಟರ್, ಬ್ಯಾಗ್, ಸಮವಸ್ತ್ರ ನೀಡುತ್ತಿರುವುದು ಸುಲಭದ ಕೆಲಸವಲ್ಲ. ಸರ್ಕಾರಿ ಶಾಲೆಗಳು ಅದರಲ್ಲಿಯೂ ಉರ್ದು ಶಾಲೆಗಳ ಬಲವರ್ಧನೆಯಾಗಬೇಕಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಪೋಷಕರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸಬೇಕೆಂಬ ಹಠ ಬಿಟ್ಟು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತಾದಾಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಮೈಲಾರಪ್ಪ, ಚನ್ನಬಸಪ್ಪ, ಆದಿಲ್, ಈಶ್ವರ್, ಮುಖ್ಯ ಶಿಕ್ಷಕಿ ಉಮೆ ಸುಮಯ್ಯ, ಶಿಕ್ಷಕಿಯರುಗಳಾದ ಎಂ.ಎಸ್.ಲತ, ರಮೀಜಾಭಾನು, ಫಾತಿಮ, ಉಮಾದೇವಿ, ಮಂಜುಳ,
ಮುಬಿನಾ, ಸೀಮ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.






