ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ,(ಜ.04) : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರು ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದಿಂದ ಎಪ್ಪತ್ತು ಲಕ್ಷ ರೂ.ಮಂಜೂರಾಗಿದ್ದು, ಕಾಮಗಾರಿ ಆರಂಭಗೊಂಡಿರುವುದರಿಂದ ವ್ಯಕ್ತಿಯೋರ್ವ ಆರು ಗುಂಟೆ ಜಾಗವಿದೆ ಎಂದು ತಗಾದೆ ತೆಗೆದಿರುವುದನ್ನು ವಿರೋಧಿಸಿ ಮುದ್ದಾಪುರದಲ್ಲಿ ಮಂಗಳವಾರ ಪ್ರಾಥಮಿಕ ಶಾಲೆ ಮಕ್ಕಳು ಪ್ರತಿಭಟನೆ ನಡೆಸಿದರು.
1977 ರಲ್ಲಿ ಏಳು ಎಕರೆ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಜನತಾ ಕಾಲೋನಿಯನ್ನು ನಿರ್ಮಿಸಿದೆ.
ಈಗ ಪ್ರಾಥಮಿಕ ಶಾಲೆಯ ಕಟ್ಟಡಗಳನ್ನು ಕೆಡವಿ ಹೊಸದಾಗಿ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರ ಎಪ್ಪತ್ತು ಲಕ್ಷ ರೂ.ಗಳನ್ನು ಮಂಜೂರು ಮಾಡಿ ಸಾರ್ವಜನಿಕರ ಓಡಾಟಕ್ಕೆ ಹದಿನೇಳು ಅಡಿಯಷ್ಟು ದಾರಿ ಬಿಟ್ಟಿದ್ದರು.
ಮುದ್ದಾಪುರದ ವಾಸಿ ಕಲ್ಲೇಶಿ ಎನ್ನುವವರು ಆರು ಗುಂಟೆ ಜಾಗ ನನಗೆ ಸೇರಬೇಕೆಂದು ತಕರಾರು ಮಾಡುತ್ತಿರುವುದರಿಂದ ಮಕ್ಕಳು ಕೊಠಡಿಯಿಲ್ಲದೆ ಮರದ ಕೆಳಗೆ ಕುಳಿತು ಪಾಠ ಕೇಳುತ್ತಿರುವುದನ್ನು ವಿರೋಧಿಸಿ ಮುದ್ದಾಪುರದ ರೈತ ನಾಗರಾಜ್ ಮಂಗಳವಾರ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರ ಇತ್ತ ಗಮನಹರಿಸಬೇಕೆಂದು ಮನವಿ ಮಾಡಿದರು.