ಧಾರವಾಡ: ಇಂದು ಹಾಲುಮತ ಮಹಾಸಭಾ ಮತ್ತು ರಾಯಣ್ಣನ ಅಭಿಮಾನಿಗಳು ಧಾರವಾಡದಲ್ಲಿ ಪ್ರತಿಭಟನೆಗೆ ಕೂತಿದ್ದರು. ಅದರಲ್ಲೂ ಸಚಿವ ಸಂತೋಷ್ ಲಾಡ್ ಅವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಮನಸೂರ ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರಿಗೆ ಅಗೌರವ ತೋರಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಸಚಿವ ಸಂತೋಷ್ ಲಾಡ್ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ.
ಜನವರಿ 26 ರಂದು ಹುತಾತ್ಮ ದಿನಾಚರಣೆ ಅಂಗವಾಗಿ ಹಾಲುಮತ ಸಮಾಜದವರು ಬಸವರಾಜ ದೇವರ ಸಾನ್ನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣನ ಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಸಮೀಪದ ಹೋಟೆಲ್‌ಗೆ ಆಗಮಿಸಿದ್ದ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ, ಅವರು ಏಕವಚನದಲ್ಲಿ ಮಾತನಾಡಿ, ಸ್ವಾಮೀಜಿ ಮತ್ತು ಆಯೋಜಕರಿಗೆ ಅಪಮಾನ ಮಾಡಿದರು ಎಂದು ಪ್ರತಿಭಟನಕಾರರು ದೂರಿದರು. ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಹಾಗೂ ಬಸವರಾಜ ದೇವರ ಬಳಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಹಾಲುಮತ ಮಹಾಸಭಾದ ಅಧ್ಯಕ್ಷ ರುದ್ರಣ್ಣ ಗುಳಗುಳಿ, ರವಿ ದಂಡಿನ, ದೇವರಾಜ ಕಂಬಳಿ, ಉದ್ಯಮಿ ಮಂಜುನಾಥ ಮಕ್ಕಳಗೇರಿ, ರಾಜೇಶ್ವರಿ ಸಾಲಗಟ್ಟಿ, ರಾಯಪ್ಪ ಐರಣಿ, ಶಿವು ಬೆಳಾರದ, ಡಿ.ಟಿ.ಪಾಟೀಲ, ಮಡಿವಾಳಪ್ಪ ಬಿದರಗಡ್ಡಿ, ರವಿ ಪಾಟೀಲ, ಬಸವರಾಜ ನಾಯ್ಕರ, ಮಂಜುನಾಥ ನಡಟ್ಟಿ ಇದ್ದರು. ರಾಯಣ್ಣರಿಗೆ, ಮನಸೂರ ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರಿಗೆ ಅಗೌರವ ತೋರಿರುವ ಕಾರಣ ಸಂತೋಷ್ ಲಾಡ್ ಅವರು ಕ್ಷಮೆ ಕೇಳಲೇಬೇಕೆಂದು ಒತ್ತಾಯಗಳು ಕೇಳಿ ಬಂತು. ಈ ಸಂಬಂಧ ಸಚಿವ ಸಂತೋಷ್ ಲಾಡ್ ಅವರು ಯಾವುದೇ ಇನ್ನು ರೀತಿಯ ಪ್ರತಿಕ್ರಿಯೆ ನೀಡಿಲ್ಲ.

