ಶಿವಮೊಗ್ಗ: ಖಾಸಗಿ ಚಾನೆಲ್ ಒಂದರಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಈ ಬೆನ್ನಲ್ಲೇ ರೈತ ಸಂಘಟನೆಯ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾ ಮಾಡಲಾಗಿದೆ. ರೈತ ಸಂಘದ ಗೌರವಾಧ್ಯಕ್ಷರಾಗಿದ್ದ ಎಚ್ ಆರ್ ಬಸವರಾಜಪ್ಪ ಅವರನ್ನೇ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇಂದು ರೈತ ಸಂಘದ ಸಭಾಂಗಣದಲ್ಲಿ ನಡೆದ ರಾಜ್ಯ ಸಮಿತಿಯ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಈ ಸಭೆಗೂ ಕೂಡ ಹಾಜರಾಗಿಲ್ಲ. ಸಾಕಷ್ಟು ಬಾರಿ ಸಭೆಗೆ ಕರೆದಿದ್ದರಂತೆ. ಕರೆ ಮಾಡಿದ್ದರೂ ಸ್ವೀಕರಿಸಿರಲಿಲ್ಲವಂತೆ. ಸಭೆಗೆ ಹೊರಟವರಿಗೆ ಕರೆ ಮಾಡಿ, ಅದೇಗೆ ಸಭೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರಂತೆ ಎಂದು ಸಭೆಯಲ್ಲಿ ರೈತ ಮುಖಂಡರು ತಿಳಿಸಿದ್ದಾರೆ.
ರೈತ ಸಂಘದ ರಾಜ್ಯ ಸಮಿತಿಯ ನಿರ್ಣಯಗಳನ್ನು ಹೊರಡಿಸಿದ್ದು ಅದರಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ ತ್ಯಾಗ ಬಲಿದಾನಗಳಿಂದ ರಚನೆಯಾಗಿದೆ. 153 ರೈತರು ಚಳುವಳಿಯ ಸಂದರ್ಭದಲ್ಲಿ ಗುಂಡಿಗೆ ಬಲಿಯಾಗಿದ್ದಾರೆ. ಲಕ್ಷಾಂತರ ರೈತರು ಲಾಠಿ ಏಟು ತಿಂದು ಜೈಲುವಾಸ ಅನುಭವಿಸಿದ್ದಾರೆ. ರಕ್ತಹರಿಸಿ ಸಂಘಟನೆಯನ್ನು ಕಟ್ಟಿದ್ದಾರೆ. ಸಂಘದ ಪಾವಿತ್ರ್ಯತೆ ಮತ್ತು ಚಳುವಳಿಯನ್ನು ರೈತರಿಗೆ, ಶೋಷಿತರಿಗಾಗಿ ಮುಂದುವರೆಸಬೇಕಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಸುದ್ದಿವಾಹಿನಿಯ ಸುದ್ದಿಯನ್ನು ಅಲ್ಲಗಳೆದಿಲ್ಲ. ತಮ್ಮ ಮೇಲಿನ ಆರೋಪವನ್ನು ನಿರಾಕರಣೆ ಮಾಡಿಲ್ಲ.
ಈ ವಿಚಾರದಿಂದಾಗಿ ನಾವೆಲ್ಲ ತಲೆ ತಗ್ಗಿಸುವಂತಾಗಿದೆ. ಇದು ರೈತ ಚಳುವಳಿಗೆ ಒಂದು ಕಪ್ಪು ಚುಕ್ಕೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ತನಿಖೆ ಆಗುವವರೆಗಾದರೂ ರಾಜೀನಾಮೆ ಕೊಟ್ಟು ಸಂಘದ ಗೌರವ ಉಳಿಸಬೇಕಿತ್ತು. ಇಂದು ಸಭೆ ಸೇರಿದ್ದವರು ಕೂಡ ಸ್ಥಾನ ತ್ಯಜಿಸಿ, ಬೇರೆಯವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಹೇಳಿದ್ದರು ಒಪ್ಪಲಿಲ್ಲ. ಈ ಕಾರಣದಿಂದಾಗಿ ಶಿವಮಿಗ್ಗದಲ್ಲಿ ಸಂಘದ ಗೌರವಾಧ್ಯಕ್ಷ ಬಸವರಾಜಪ್ಪರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.