ಸುದ್ದಿಒನ್, ಚಿತ್ರದುರ್ಗ. ನ.10: ಕಾಂಗ್ರೆಸ್ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಮಾಡಬೇಕೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ.
ಭೋವಿ ಗುರುಪೀಠದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ರವಿಮಾಕಳೆ ಅವರ ಅಧ್ಯಕ್ಷತೆಯಲ್ಲಿ ಸಮಾವೇಶಗೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಆಹಾರ ಇಲಾಖೆಯ ಸಚಿವ ಕೆ.ಹೆಚ್.ಮುನಿಯಪ್ಪ ಅವರು ತಮ್ಮ ಜನಾಂಗದ ಮುಖಂಡರ ಸಭೆಯಲ್ಲಿ ಭಾಗವಹಿಸಿ, ಅವೈಜ್ಞಾನಿಕ, ಅಸಂವಿಧಾನಿಕ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಮಾಡಬೇಕೆಂದು ಸಮುದಾಯ ಮುಖಂಡರ ಸಭೆಯಲ್ಲಿ ಪ್ರಸ್ಥಾಪಿಸುವ ಮೂಲಕ ಪ್ರಚೋಧನಕಾರಿ ಹೇಳಿಕೆ ನೀಡಿದ್ದು, ಕೆ.ಹೆಚ್.ಮುನಿಯಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಸಭೆ ನಿರ್ಣಯಿಸಿದೆ.
ಬೆಳಗಾವಿಯಲ್ಲಿ ಡಿಸೆಂಬರ್ ನಾಲ್ಕರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ವರದಿಯನ್ನು ಮಂಡಿಸಲು ಆಗ್ರಹಿಸಿರುವ ಸಚಿವ ಕೆ.ಹೆಚ್.ಮುನಿಯಪ್ಪ ಜನವಿರೋಧಿಯಾಗಿದ್ದು, ಪರಿಶಿಷ್ಟ ಜಾತಿ/ವರ್ಗದವರಲ್ಲಿ ತಾರತಮ್ಯ ಉಂಟುಮಾಡಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ನಿರ್ಣಯಿಸಿರುವ ರಾಜ್ಯಮಟ್ಟದ ಸಮಿತಿ ಮುನಿಯಪ್ಪ ಅವರು ಪ್ರವಾಸ ಕೈಗೊಂಡ ಕಡೆಯಲ್ಲೆಲ್ಲಾ ಅವರಿಗೆ ಘೇರಾವ್‍ಮಾಡಿ ಪ್ರತಿಭಟಿಸಲು ರಾಜ್ಯಮಟ್ಟದ ಸಮಿತಿ ನಿರ್ಧರಿಸಿದೆ.
ಕರ್ನಾಟಕ ಮೀಸಲಾತಿ ಸಂರಕ್ಷಣ ಒಕ್ಕೂಟದ ರಾಜ್ಯಕಾರ್ಯಾಧ್ಯಕ್ಷ ರಾಘವೇಂದ್ರ ನಾಯಕ್ ಅವರು ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಜಾತಿವಾದಿಯಾಗಿ ವರ್ತಿಸಿದ್ದು, ಇವರ ನಡುವಳಿಕೆಯಿಂದಾಗಿ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ಸಚಿವ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಉಪ ಸಮಿತಿ ರಚನೆಮಾಡಿ ವರದಿಯೊಂದನ್ನು ತಯಾರಿಸಿದ್ದು, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಅವೈಜ್ಞಾನಿಕ ಮತ್ತು ಕಪೋಲಕಲ್ಪಿತ ವಿಷಯಗಳೆ ಹೆಚ್ಚಾಗಿದ್ದು, ಇವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಹಾಗೂ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೈಬಿಟ್ಟು ಮಾಧುಸ್ವಾಮಿ ಅವರ ನೇತೃತ್ವದ ಉಪಸಮಿತಿಯ ವರದಿಯನ್ನು ಪರಿಗಣಿಸಿ ರಾಜ್ಯಸರ್ಕಾರದಿಂದ ಕೇಂದ್ರಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆ.ಹೆಚ್.ಮುನಿಯಪ್ಪ ಅವರು ಸದಾಶಿವ ಆಯೋಗದ ವರದಿಯನ್ನು ಮುನ್ನೆಲೆಗೆ ತರುವ ಮೂಲಕ ಪರಿಶಿಷ್ಟ ಜಾತಿಯ ಜನರಲ್ಲಿ ಗೊಂದಲವನ್ನು ಸೃಷ್ಟಿಮಾಡುತ್ತಿದ್ದು, ಇವರ ಹೇಳಿಕೆಯಿಂದಾಗಿ ಪರಿಶಿಷ್ಟ ಜಾತಿಯ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ ಎಂದು ಹೇಳಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ರವಿಮಾಕಳಿ ಮಾತನಾಡಿ ಸಚಿವ ಕೆ.ಹೆಚ್.ಮುನಿಯಪ್ಪ ಅವರ ವಿರುದ್ಧ ರಾಜ್ಯಾದ್ಯಂತ ಹೋರಾಟವನ್ನು ರೂಪಿಸಲು ಮೀಸಲಾತಿ ಸಂರಕ್ಷಣಾ ಒಕ್ಕೂಟ ನಿರ್ಧರಿಸಿದ್ದು, ಪರಿಶಿಷ್ಟ ಜಾತಿಯ ಭೋವಿ, ಲಂಬಾಣಿ, ಕೊರಚ, ಕೊರಮ ಜನಾಂಗದವರು ರಾಜ್ಯವ್ಯಾಪಿ ಕೆ.ಹೆಚ್.ಮುನಿಯಪ್ಪ ಅವರನ್ನು ವಜಾಮಾಡಲು ಆಗ್ರಹಿಸಿ, ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಬಳಿಗೆ ನಿಯೋಗ ಹೋಗಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇಳಕಲ್ ಮಹಾಂತಪ್ಪ ಮಠದ ಶಾಖಾಮಠದ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಈ ಸಮುದಾಯಗಳ ಹಿತರಕ್ಷಣೆಗಾಗಿ ತಾವು ಸದಾಸಿದ್ಧ ಇರುವುದಾಗಿ ಹೇಳಿದರು.
ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಜಿ, ಲಂಬಾಣಿ ಸ್ವಾಮಿಜಿ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗಂಗಾನಾಯ್ಕ್ ಗೋಂಧಿ, ಸಂಘಟನಾ ಕಾರ್ಯದರ್ಶಿ ರವಿಕಾಂತ್ ಅಂಗಡಿ, ಸಾಮಾಜಿಕ ಚಿಂತಕರಾದ ರೂಪಾನಾಯ್ಕ್, ಜಿಲ್ಲಾ ಭೋವಿಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ಆನಂದಪ್ಪ, ಹನುಮಂತಪ್ಪ ಗೋಡೆಮನೆ, ಬಾಲ್ಯನಾಯ್ಕ, ಪ್ರಕಾಶ್, ಬಾಲಾಜಿ, ಬುಟ್ಟಾನಾಯ್ಕ, ಪ್ರಕಾಶ್‍ರಾಮನಾಯ್ಕ, ವಸಂತನಾಯ್ಕ, ರಮೇಶ, ಗಣೇಶ, ಅನಂತನಾಯ್ಕ, ವೀಣಾ, ತುಳಸಿ ಮುಂತಾದವರು ಹಾಜರಿದ್ದರು.