ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಚುನಾವಣಾ ಕಾರ್ಯತಂತ್ರ, ಮುಂದಿನ ಪ್ರವಾಸದ ಕುರಿತು ನಾನು ಮತ್ತು ಮುಖ್ಯಮಂತ್ರಿಗಳು ಚರ್ಚಿಸಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎರಡೂ ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ. ಅದಕ್ಕೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು. ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಸಚಿವರು, ಶಕ್ತಿ ಕೇಂದ್ರಕ್ಕೆ ಶಾಸಕರು ಮತ್ತು ಮತಗಟ್ಟೆಯಲ್ಲಿ ಪದಾಧಿಕಾರಿಗಳನ್ನು ಜೋಡಿಸಲಾಗಿದೆ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ಪ್ರಮುಖ ಸಚಿವರು ಹಾಗೂ ಪಾರ್ಟಿಯಿಂದ ಒಬ್ಬ ಪ್ರಧಾನ ಕಾರ್ಯದರ್ಶಿಯನ್ನು ಜೋಡಿಸಲಾಗಿದೆ. ರಾಜ್ಯದ ಕೆಲವು ಪ್ರಮುಖರನ್ನು ಈಗ ಪ್ರವಾಸಕ್ಕೆ ಜೋಡಿಸಲಾಗಿದೆ ಎಂದರು.
ಇದೇ 16ರ ಬಳಿಕ ಎಲ್ಲ ಸಚಿವರು 2 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ.
ಸಂಬಂಧಿತ ಸಂಸದರು ಮತ್ತು ಶಾಸಕರನ್ನೂ ಜೋಡಿಸಿದ್ದು, ಅವರೂ ಅಲ್ಲಿ ಇರುತ್ತಾರೆ. ಯಡಿಯೂರಪ್ಪ ಅವರೂ 2 ಕಡೆ ಪ್ರವಾಸ ಮಾಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಯಡಿಯೂರಪ್ಪ ಅವರು ಉಪ ಚುನಾವಣೆ ನಂತರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನಿಗಮ ಮಂಡಳಿಗೆ ನೇಮಕ, ಸಚಿವ ಸಂಪುಟ ವಿಸ್ತರಣೆಯಂಥ ಎಲ್ಲ ಕಾರ್ಯಗಳು ಉಪ ಚುನಾವಣೆ ನಂತರವೇ ನಡೆಯಲಿವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಐಟಿ ಅದರದ್ದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ. ಅದರಲ್ಲಿ ರಾಜಕಾರಣ ಇಲ್ಲ ಎಂದು ಅವರು ಈ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು.