ಚಿತ್ರದುರ್ಗ, (ಜು.07) : ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದ ಹಣವನ್ನು ತಕ್ಷಣ ಬಳಸಿಕೊಂಡು ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕವಿತ ಎಸ್.ಮನ್ನೀಕೇರಿ ಹೇಳಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ಭವನ ನಿರ್ಮಾಣ ಸಮಿತಿ ಸಭೆಯಲ್ಲಿ ಮಾತನಾಡಿದರು. ಇದೀಗ ಎಸ್‍ಬಿಐ ನ ಖಾತೆಯಲ್ಲಿ 19,18,503 ರೂಪಾಯಿಗಳಷ್ಟು ಹಣವಿದೆ. ಒಂದು ವರ್ಷದ ಹಿಂದೆ ಜರುಗಿದ ಸಭೆಯಲ್ಲಿ ಇದನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.
ಇದೀಗ ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಹಣವಿದೆ. ಇದಕ್ಕೆ ಬ್ಯಾಂಕ್ ನಲ್ಲಿ ಬಡ್ಡಿ ಕಡಿಮೆ ಇರುತ್ತದೆ. ಆದ್ದರಿಂದ ಆರು ತಿಂಗಳ ಅವಧಿಗೆ ಇದನ್ನು ಫಿಕ್ಸೆಡ್ ಡಿಪಾಸಿಟ್ ಮಾಡಿದರೆ ಹಣಕ್ಕೆ ಹೆಚ್ಚಿನ ಬಡ್ಡಿ ದೊರೆಯುತ್ತದೆ. ಆದ್ದರಿಂದ ಕನ್ನಡ ಭವನ ನಿರ್ಮಾಣ ಸಮಿತಿ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಠೇವಣಿ ಇಡಬೇಕು. ಕೇಂದ್ರ ಸಮಿತಿ ಜೊತೆಗೆ ತಕ್ಷಣ ಪತ್ರ ಸಂಪರ್ಕ ಮಾಡಿ ನಿರ್ಮಾಣ ಮಾಡುವಂತೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ ಮಾತನಾಡಿ, ಒಂದು ವರ್ಷದ ಹಿಂದೆ ಕನ್ನಡ ಭವನ ನಿರ್ಮಾಣ ಸಮಿತಿ ಸಭೆ ಕರೆಯಲಾಗಿತ್ತು. ಈ ಹಣವನ್ನು ಬಳಸಿಕೊಳ್ಳುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಕಸಾಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಸಭೆ ವಿಳಂಬವಾಗಿದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಸಮ್ಮೇಳನದಲ್ಲಿ ಉಳಿದಿರುವ ಹಣ, ಜನಪ್ರತಿನಿಧಿಗಳು,ದಾನಿಗಳ ನೆರವನ್ನು ಬಳಸಿಕೊಂಡು ಕನ್ನಡ ಭವನ ನಿರ್ಮಾಣ ಮಾಡಬೇಕು. ಇದಕ್ಕೆ ಕೇಂದ್ರ ಪರಿಷತ್ತಿನ ಪತ್ರ ಬರೆಯಲಾಗುವುದು. ನಗರದಲ್ಲಿ ಕಸಾಪ ಕಾರ್ಯನಿರ್ವಹಣೆಗೆ ಕಟ್ಟಡವಿಲ್ಲ. ಆದ್ದರಿಂದ ವೀರಸೌಧ ವನ್ನು ತಾತ್ಕಾಲಿಕವಾಗಿ ಬಳಸಲು ಅನುಮತಿ ನೀಡುವಂತೆ ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಇದನ್ನು ಬಳಸಿಕೊಳ್ಳುತ್ತಿರುವವರ ಜತೆಗೆ ಸಂಪರ್ಕಿಸುವಂತೆ ಸೂಚಿಸಿದರು.
ಮಾಜಿ ಅಧ್ಯಕ್ಷ ದೊಡ್ಡ ಮಲ್ಲಯ್ಯ ಮಾತನಾಡಿ, ಎಸ್‍ಬಿಐ ಖಾತೆಯಲ್ಲಿ 18 ಲಕ್ಷ ರೂ ಹಣವಿದೆ. ಉಳಿದ 15 ಲಕ್ಷ ರೂಗಳನ್ನು ಕೇಂದ್ರ ಸಾಹಿತ್ಯ ಪರಿಷತ್ತಿಗೆ ಕಳಿಸಲಾಗಿದೆ. ಸಮ್ಮೇಳನ ಉಳಿಕೆ ಹಣದಲ್ಲಿ ನಿವೇಶನ ಖರೀದಿ ಮಾಡಲಾಗಿದೆ ಎಂದು ವಿವರ ನೀಡಿದರು.
ಮಾಜಿ ಅಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, 75 ನೇ ಅಮೃತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. 2009 ಫೆ.4 ರಿಂದ 7 ರವರೆಗೆ ಜರುಗಿದ ಈ ಸಮ್ಮೇಳನದಲ್ಲಿ ಹಣ ಉಳಿತಾಯವಾಗಿತ್ತು. ಇದನ್ನು ಬ್ಯಾಂಕ್ ನಲ್ಲಿರಿಸಲಾಗಿದೆ. ಕೆಲವು ಖರ್ಚುವೆಚ್ಚಗಳ ಲೆಕ್ಕವನ್ನು ತಕ್ಷಣ ನೀಡಲಾಗುವುದು. ಅದೇ ಸಂದರ್ಭದಲ್ಲಿ ಖರೀದಿಸಿದ್ದ ಕೆಲವು ಪೀಠೋಪಕರಣಗಳನ್ನು ಕಸಾಪ ಕಚೇರಿಗೆ ನೀಡುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜ್ ಮಾತನಾಡಿ, ಸಮ್ಮೇಳನದಲ್ಲಿ ಉಳಿದ ಹಣ ಸರಿಯಾದ ಉದ್ದೇಶಕ್ಕೆ ಬಳಕೆಯಾಗಬೇಕು. ಸಾರ್ವಜನಿಕರು ಹಾಗೂ ದಾನಿಗಳು ಸಮ್ಮೇಳನಕ್ಕೆ ನೀಡಿದ ಹಣ ಕನ್ನಡ ಭವನ ನಿರ್ಮಾಣಕ್ಕೆ ಬಳಕೆಯಾಗಬೇಕು. ಆಗ ಉಳಿದಿರುವ ಎಲ್ಲ ಪೀಠೋಪಕರಣಗಳನ್ನು ಕಸಾಪಗೆ ನೀಡಬೇಕು ಎಂದರು.
ಕಸಾಪ ಮಾಜಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ, ಎಲ್. ರಮೇಶ್ ರಾವ್, ಪ್ರಧಾನ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಹಾಗೂ ಎಸ್‍ಬಿಐ ಸಿಬ್ಬಂದಿ ಇದ್ದರು.