ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಿ : ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹ

2 Min Read

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಯಡಿ ಲಭ್ಯವಿರುವ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಬೇಕೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವ ಆಗ್ರಹಿಸುತ್ತದೆ.

ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಳೆಗಾಲ ಆರಂಭವಾಗಿದ್ದು ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಭದ್ರಾ ಜಲಾಶಯದ  ಒಟ್ಟಾರೆ ಸಂಗ್ರಹ ಸಾಮರ್ಥ್ಯ 186 ಅಡಿಯಷ್ಟಿದ್ದು ಶುಕ್ರವಾರ 164 ಅಡಿಗೆ ಮುಟ್ಟಿದೆ. ಜಲಾಶಯ ಭರ್ತಿಗೆ ಕೇವಲ 22 ಅಡಿ ಮಾತ್ರ ಬಾಕಿ ಇದೆ. ಕಳೆದ ವಾರದಿಂದ ಸುರಿಯುತ್ತಿರುವ ಮಳೆ ಹಾಗೆಯೇ ಮುಂದುವರಿದರೆ  ಕೆಲವೇ ದಿನಗಳಲ್ಲಿ ತುಂಬಲಿದೆ.

ಭದ್ರಾ ಜಲಾಶಯದಿಂದ ಚಿತ್ರದುರ್ಗಪ್ರದೇಶಕ್ಕೆ ನೀರು ಹಾಯಿಸಲು ಸಿಬಿಸಿ ಲೆವಲ್ 130 ಅಡಿ ನಿಗಧಿಪಡಿಸಲಾಗಿದೆ.  145 ಅಡಿ ನೀರು ಸಂಗ್ರಹವಾದಲ್ಲಿ ನಾಲ್ಕು ಮೋಟಾರು ಪಂಪುಗಳ ಚಾಲನೆ ಮಾಡುವ ಅವಕಾಶ ಕಲ್ಪಿಸಿದ್ದು ಹಾಲಿ ಜಲಾಶಯದಲ್ಲಿ 164 ಅಡಿ ನೀರು ಸಂಗ್ರಹವಾಗಿರುವುದರಿಂದ ವಿವಿ ಸಾಗರಕ್ಕೆ ಲಿಫ್ಟ್ ಮಾಡಲು ಯಾವುದೇ ಆತಂಕವಿಲ್ಲ. ಹಾಗಾಗಿ ಜಲಾಶಯ ಭರ್ತಿಯಾಗಿ ನೀರು ವ್ಯರ್ಥವಾಗಿ ಹೊರ ಹೋಗುವ ಮೊದಲು ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸುವಂತೆ ಒತ್ತಾಯಿಸಿದರು.

ಭದ್ರಾದಿಂದ ನೀರನ್ನು ಲಿಫ್ಟ್ ಮಾಡುವ ಸಂಬಂಧ ಈಗಾಗಲೇ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿಯಿಂದ ಜಲ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಹೋಗಿದೆ. ಅನುಮತಿ ಸೂಚಿಸಿದರೆ ವಾರದಲ್ಲಿ ನೀರನ್ನು ಪಂಪ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಬಹುದಾಗಿದೆ. ವಿವಿ ಸಾಗರ ಜಲಾಶಯದಲ್ಲಿ ಸದ್ಯ 120 ಅಡಿಯಷ್ಟು ನೀರು ಇದೆ. ಪಂಪುಗಳ ಸ್ಟಾರ್ಟ್ ಮಾಡಿದಲ್ಲಿ ಜಲಾಶಯ ಈ ವರ್ಷವೇ ಭರ್ತಿಯಾಗುತ್ತದೆ. ವ್ಯರ್ಥವಾಗುವ ನೀರನ್ನು ಬಳಕೆ ಮಾಡಿಕೊಳ್ಳುವುದರ ಕಡೆ ಸರ್ಕಾರ ಗಮನ ಹರಿಸಬೇಕೆಂದು ವಿನಂತಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಅಜ್ಜಂಪುರ ಪ್ರದೇಶದಲ್ಲಿ ರೈತರ ಆಕ್ಷೇಪಣೆಯಿಂದಾಗಿ ಕಾಲುವೆ ತೋಡುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಹೋರಾಟ ಸಮಿತಿಯಿಂದ ಈಗಾಗಲೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭೇಟಿ ಮಾಡಿ ರೈತರ ಮನವೊಲಿಸಿ ಕಾಮಗಾರಿ ಆರಂಭಕ್ಕೆ ಅವಕಾಶ ಮಾಡಿಕೊಡುವಂತೆ ಕೋರಲಾಗಿತ್ತು.   ಇದಲ್ಲದೇ ಕಳೆದ ವಾರವಷ್ಟೇ ಮುಖ್ಯಮಂತ್ರಿಗಳು  ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸ್ಪಷ್ಟ ನಿರ್ದೇಶನ ನೀಡಿ ಭೂ ಸ್ವಾಧೀನದ  ತೊಡಕು ನಿವಾರಿಸುವಂತೆ ಸೂಚಿಸಿದ್ದರು. ಇದಾದ ತರುವಾಯ ನಾಲ್ಕು ದಿನದ ಹಿಂದೆಯಷ್ಟೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ರೈತರೊಂದಿಗೆ ಸಭೆ ನಡೆಸಿದ್ದು ಭೂಮಿ ಬಿಟ್ಟುಕೊಡುವ ಬಗ್ಗೆ ಮನವಿ ಮಾಡಿದ್ದಾರೆ.

ಇಷ್ಟೆಲ್ಲ ಆದರೂ ಅಲ್ಲಿನ ಸಮಸ್ಯೆ ನಿವಾರಣೆಯಾಗಿಲ್ಲ. ಹಾಗಾಗಿ ಕಾಲುವೆ ತೋಡುವ ಕೆಲಸವನ್ನಾದರೂ ಮಾಡಿ, ಇಲ್ಲವಾದಲ್ಲಿ ಭದ್ರಾ ಜಲಾಶಯದ ನೀರನ್ನು  ಲಿಫ್ಟ್ ಮಾಡಿ ಕಾಲುವೆಗಾದರೂ ಹರಿಸಿ ಎಂಬುದು ಹೋರಾಟ ಸಮಿತಿ ಸ್ಪಷ್ಟ ಅಭಿಪ್ರಾಯವಾಗಿದೆ. ಮಳೆಗಾಲ ಆರಂಭವಾಗಿರುವುದರಿಂದ ಕಾಲುವೆ ತೋಡುವ ಕೆಲಸ ಕಷ್ಟವಾಗಬಹುದು. ಹಾಗಾಗಿ ಮಳೆಗಾಲ ಮುಗಿಯುವ ತನಕ ನೀರನ್ನು ಲಿಫ್ಟ್ ಮಾಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ  ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್,  ಸಿಪಿಐ ಮುಖಂಡ ಸುರೇಶ್‍ಬಾಬು, ಜೆಡಿಎಸ್ ಮುಖಂಡ ಜಿ.ಬಿ.ಶೇಖರ್, ಸ್ವರಾಜ್ ಇಂಡಿಯಾದ ಜೆ.ಯಾದವರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ತಾಲೂಕು ಅಧ್ಯಕ್ಷ  ಧನಂಜಯ ಹಂಪಯ್ಯನಮಾಳಿಗೆ, ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ಹಿರಿಯೂರು ತಾಲೂಕು ಅಧ್ಯಕ್ಷ ಶಿವಕುಮಾರ್, ಎಸ್‍ಯುಸಿಐ ನ ರವಿಕುಮಾರ್, ನಿಂಗರಾಜ್, ರೈತ ಸಂಘದ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಹಿರಿಯೂರು ಬಿ.ಟಿ.ಓಬಣ್ಣ, ಎಂ.ತಿಪ್ಪೇಸ್ವಾಮಿ, ಎಂ.ಲಕ್ಷ್ಮಿಕಾಂತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *