ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್ ನಲ್ಲಿಯೇ ನೇಹಾರ ಕೊಲೆಯಾಗಿದೆ. ಫಿರೋಜ್ ಎಂಬಾತ ಪ್ರೀತಿಯ ವಿಚಾರಕ್ಕೆ ನೇಹಾ ಅವರನ್ನು ಚುಚ್ಚಿ ಚುಚ್ಚಿ ಕೊಂದಿದ್ದಾರೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾನೆ. ತನಿಖೆ ನಡೆಯುತ್ತಿದೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ಗೋಳಾಟ, ಕಣ್ಣೀರು ಕಾಣಿಸುತ್ತಿದೆ. ಇದರ ನಡುವೆ ನೇಹಾ ಅವರ ಅಂತಿಮ ದರ್ಶನಕ್ಕೆ ಸ್ವಾಮೀಜಿಗಳು ಪಡೆದಿದ್ದಾರೆ. ಅದರಲ್ಲೂ ದಿಂಗಾಲೇಶ್ವರ ಶ್ರೀಗಳು ನೇಹಾರನ್ನು ನೋಡಿ ಕಣ್ಣೀರು ಹಾಕಿದ್ದಾರೆ.
ನೇಹಾ ಅವರ ಅಂತಿಮ ದರ್ಶನಕ್ಕೆ ಮೂರು ಸಾವಿರ ಮಠದ ಸ್ವಾಮೀಜಿಗಳು ಆಗಮಿಸಿದ್ದು, ಸಾಂತ್ವನ ಹೇಳಿದ್ದಾರೆ. ಮೂರು ಸಾವಿರ ಮಠದ ಗುರು ಸಿದ್ದರಾಜಯೋಗೀಂದ್ರ ಸ್ವಾಮೀಜಿಗಳ ಎದುರು ಕುಟುಂಬಸ್ಥರು ಕಣ್ಣೀರು ಹಾಕಿದ್ದು, ಗುರೂಜಿ ಸಾಂತ್ವಾನ ಹೇಳಿದ್ದಾರೆ.
ನೇಹಾ ಅವರ ತಂದೆ ಹಿರೇಮಠ್ ಮಗಳ ಗುಣವನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅವಳು ನನ್ನ ಮಗಳಲ್ಲ ಬುದ್ದಿ ಫ್ರೆಂಡ್ ಥರ ಇದ್ದಳು. ನಮ್ಮ ಮನೆಗೆ ಮಹಾಲಕ್ಷ್ಮಿ ಆಕೆ. ಮಗಳಿಗೆ ಅನ್ಯಾಯವಾಗಿದೆ. ಮಗಳ ಆತ್ಮಕ್ಕೆ ಶಾಂತಿ ಸಿಗಬೇಕು. ನೀವೇ ನ್ಯಾಯಕ್ಕಾಗಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ನೇಹಾ ದಿಂಗಾಲೇಶ್ವರ ಸ್ವಾಮೀಜಿಯ ಅಪ್ಪಟ ಶಿಷ್ಯೆಯಾಗಿದ್ದರು. ಶಿಷ್ಯೆಯ ಸಾವಿನ ಸುದ್ದಿ ಕೇಳಿ ದುಃಖಿತರಾದ ದಿಂಗಾಲೇಶ್ವರ ಸ್ವಾಮೀಜಿ ಅವರು ಕೂಡ ನೇಹಾ ಅವರ ಅಂತಿಮ ದರ್ಶನ ಮಾಡಿದ್ದಾರೆ. ಶಿಷ್ಯೆಯ ಸಾವನ್ನು ಕಂಡು ದಿಂಗಾಲೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದ್ದಾರೆ. ದುಃಖದಲ್ಲಿ ಮುಳುಗಿದ್ದ ಕುಟುಂಬಸ್ಥರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.
ಇನ್ನು ನೇಹಾ ಅವರ ಅಂತಿಮ ಯಾತ್ರೆಯನ್ನು ಬಸವ ನಗರದಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿಸಲಾಯ್ತು. ನಗರದ ಮಂಟೂರು ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ವಿಧಿವಿಧಾನದ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗಿದೆ.