ಬೆಂಗಳೂರು; ಪಿಯುಸಿ ಮುಗಿದ ಬಳಿಕ ವಿದ್ಯಾರ್ಥಿಗಳೆಲ್ಲ ತಮ್ಮ ಮುಂದಿನ ವಿಧ್ಯಾಭ್ಯಾಸದತ್ತ ಗಮನ ಹರಿಸುತ್ತಾರೆ. ಅದಕ್ಕೆ ಸಿಇಟಿ ಪ್ರಮುಖ ಪರೀಕ್ಷೆಯಾಗಿರುತ್ತದೆ. ವೃತ್ತಿಪರ ಕೋರ್ಸ್ ಗಳಿಗಾಗಿ ಈಗಾಗಲೇ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16 ಮತ್ತು 17ನೇ ತಾರೀಖು ಪರೀಕ್ಷೆ ನಡೆದಿದೆ. ನಿನ್ನೆ ಕಡೆಯ ದಿನವಾದ ಪರೀಕ್ಷೆಯಲ್ಲಿ ಜನಿವಾರ ತೆಗೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗೆ ಜನಿವಾರ ತೆಗೆಯುವುದಕ್ಕೆ ಸೂಚಿಸಲಾಗಿತ್ತು. ಆದರೆ ವಿದ್ಯಾರ್ಥಿ ತೆಗೆಯಲ್ಲ ಎಂದ ಕೂಡಲೇ ಜನಿವಾರವನ್ನ ಕತ್ತರಿಸಿ ಪರೀಕ್ಷೆಯನ್ನ ಬರೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬೀದರ್ ನಲ್ಲೂ ಕೂಡ ಇಂಥದ್ದೇ ಪ್ರಕರಣದ ಆರೋಪ ಕೇಳಿ ಬಂದಿದೆ. ಜನಿವಾರವನ್ನು ಧರಿಸಿಯೇ ವಿದ್ಯಾರ್ಥಿ ಎರಡು ಪರೀಕ್ಷೆಯನ್ನು ಬರೆದಿದ್ದ. ಆದರೆ ನಿನ್ನೆ ಪರೀಕ್ಷೆ ಬರೆಯಲು ಬಂದಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜನಿವಾರವನ್ನು ಕಂಡು ಅದನ್ನು ತೆಗೆಸಿ ಪರೀಕ್ಷೆ ಬರೆಸಿರುವ ಆರೋಪ ಕೇಳಿ ಬಂದಿದೆ.
ಜನಿವಾರ ತೆಗೆಸಿರೋ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಉನ್ನತ ಶಿಕ್ಷಣ ಸಚುವ ಎಂ.ಸಿ.ಸುಧಾಕರ್, ಈ ಘಟನೆ ಬಗ್ಗೆ ಭೈರತಿ ಸುರೇಶ್ ಅವರು ಫೋನ್ ಮಾಡಿ ಕೇಳಿದರು. ಸಂಜೆಯವರೆಗೂ ನನಗೆ ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದಾಗ ಸುಗಮವಾಗಿ ಪರೀಕ್ಷೆ ನಡೆದಿದೆ ಎಂದು ತಿಳಿಸಿದರು. ಆದರೆ ಶಿವಮೊಗ್ಗ ಹಾಗೂ ಬೀದರ್ ಘಟನೆಯನ್ನು ಖಂಡಿತ ಒಪ್ಪುವಂಥದ್ದಲ್ಲ. ಶಿವಮೊಗ್ಗದಲ್ಲಿ ಈ ರೀತಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಭೀರವಾಗಿ ಪರಿಗಣನೆ ಮಾಡ್ತೀವಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.


