ಹುಬ್ಬಳ್ಳಿ: ಸಿದ್ದರಾಮಯ್ಯ ಸರ್ಕಾರದ ಮೇಲೆ 60% ಸರ್ಕಾರ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಇಂದು ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ ಅವರು, ರಾಜ್ಯ ಸರ್ಕಾರದ 60% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಳುತ್ತಾರೆ. ನಮ್ಮ ಆಡಳಿತವಿದ್ದಾಗ 40% ಸರ್ಕಾರ ಎಂದರಲ್ಲ ಆಗ ಯಾವ ದಾಖಲೆ ನೀಡಿದರು. ಇದುವರೆಗೂ ಆ ಸಂಬಂಧ ದಾಖಲೆಯನ್ನ ಕೊಡಲೇ ಇಲ್ಲ. ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ಗೊತ್ತು.
ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಯಾವುದೇ ಇಲಾಖೆಯಲ್ಲೂ ಕೆಲಸ ಆಗುತ್ತಿಲ್ಲ. ಜನಸಾಮಾನ್ಯರರಿಗೆ, ಗುತ್ತಿಗೆದಾರರಿಗೆ, ಎಲ್ಲಾ ವರ್ಗದ ಜನರಿಗೆ ಭ್ರಷ್ಟಾಚಾರದ ಬಿಸಿ ಮುಟ್ಟಿದೆ. ಇನ್ನೂ ಏನೂ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಿರುವುದು ಭ್ರಷ್ಟಾಚಾರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂದಿದ್ದಾರೆ.
ಇದೆ ವೇಳೆ ಗ್ಯಾರಂಟಿಗಳ ಬಗ್ಗೆ ಮಾತನಾಡಿ, ಯಡಿಯೂರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಜಾರಿ ಮಾಡಿದ್ದೇವೆ. ಹೆಣ್ಣು ಮಗು ಹುಟ್ಟಿದರೆ ಭಾಗ್ಯಲಕ್ಷ್ಮೀ ಜಾರಿ ಮಾಡಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಜಾರಿ ಮಾಡಿದ್ದೇವೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಕಷ್ಟು ಅನುಕೂಲ ಮಾಡಿದೆವು. ಇದೆಲ್ಲವನ್ನು ಕಾಂಗ್ರೆಸ್ ಕೊಟ್ಟಿದೆಯಾ. ಇವರೇನು ಮಾಡಿದರು. ಒಂದು ರಸ್ತೆ ಸರಿ ಇಲ್ಲ. ಬಸ್ ದರ ಏರಿಕೆ ಜನ ವಿರೋಧಿ ತೀರ್ಮಾನ. ಜನರೇ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಶಕ್ತಿ ಯೋಜನೆ ಮಾಡಿ ಅದಕ್ಕೆ ನೀಡಬೇಕಾದ ಹಣ ಸರಿಯಾಗಿ ನೀಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.