ಕಲಬುರಗಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದು ವಿಪಕ್ಷಗಳೆಲ್ಲಾ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದು, ಇಂಡಿಯಾ ಕೂಟವನ್ನು ರಚಿಸಿಕೊಂಡಿವೆ. ಇಂಡಿಯಾ ಮೈತ್ರಿಕೂಟದಿಂದ ಪ್ರಧಾನಿ ಯಾರಾಗುತ್ತಾರೆ ಎಂಬ ಚರ್ಚೆಯೂ ಸಾಕಷ್ಟು ನಡೆಯುತ್ತಿದೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ತಮ್ಮ ತಂದೆಯ ಹೆಸರನ್ನೇ ಪ್ರಸ್ತಾಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಧಾನಿ, ಉಪಪ್ರಧಾನಿ ಯಾರಾಗಬೇಕು ಎಂಬ ವಿಚಾರ ಬಂದಾಗ ಆ ಸಮಾಜದ ನಾಯಕರಿಗೆ ಜಾತಿಯ ಲೇಪನ ಹಚ್ಚುವುದು ತಪ್ಪು. ಅವರೂ ಸಮರ್ಥರಲ್ಲವಾ..? ಆ ಸಮುದಾಯದವರ ದಕ್ಷತೆ ನೋಡುವುದಿಲ್ಲವಾ..? ನರೇಂದ್ರ ಮೋದಿ ಅವರಿಗೆ ಸ್ಥಾನ ಮಾನ ನೀಡುವಾಗ ಅವರ ಜಾತಿ ಕೇಳಲಿಲ್ಲ. ಅವರು ಎಷ್ಟು ಸಮರ್ಥರು ಎನ್ನುವುದನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇವೆ ಎಂದಿದ್ದಾರೆ.
ಮೈತ್ರಿಕೂಟದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತಿಗೆ ಕಳುಹಿಸುವುದು ನಮ್ಮ ಉದ್ದೇಶ. ಯಾರು ಪ್ರಧಾನಿ, ಯಾರೂ ಉಪಪ್ರಧಾನಿ ಎಂಬ ಸವಾಲು ಸದ್ಯಕ್ಕೆ ನಮ್ಮ ಮುಂದೆ ಇಲ್ಲ. ಕಾಂಗ್ರೆಸ್ 20-25 ಸ್ಥಾನವನ್ನು ಗೆಲ್ಲಲಿದೆ ಎಂದಿದ್ದಾರೆ. ಈ ಮೂಲಕ ತಮ್ಮ ತಂದೆಯ ಸಾಮರ್ಥ್ಯದ ಬಗ್ಗೆಯೂ ಪರೋಕ್ಷವಾಗಿ ಮಾತನಾಡಿದ್ದಾರೆ.