ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ನಿನ್ನೆಯಷ್ಟೇ ವಕೀಲ ದೇವರಾಜೇಗೌಡ, ಈ ವಿಡಿಯೋ ರಿಲೀಸ್ ಹಿಂದೆ ಡಿಕೆ ಶಿವಕುಮಾರ್ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಶಿವರಾಮೇಗೌಡರ ಬಗ್ಗೆಯೂ ಆಡಿಯೋ ರಿಲೀಸ್ ಮಾಡಿದ್ದರು. ಇದೀಗ ಆ ಆರೋಪಕ್ಕೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ತಿರುಗೇಟು ನೀಡಿದ್ದಾರೆ.
ಪೆನ್ ಡ್ರೈವ್ ರಿಲೀಸ್ ಮಾಡುವುದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಅನುಮತಿ ಕೊಟ್ಟಿದ್ದರು ಎಂದು ಹೊಸ ಬಾಂಬ್ ಹಾಕಿದ್ದಾರೆ. ಯಾರೋ ಹೊಳೆನರಸೀಪುರದ ಕಡೆಯವರು ಬಂದು, ದೇವರಾಜೇಗೌಡ ನಿಮ್ಮ ಬಳಿ ಮಾತನಾಡಬೇಕು ಎಂದರು. ಆಗ ಫೋನ್ ಮಾಡಿಕೊಡಿ ಎಂದು ಹೇಳಿದೆ. ನಂತರ ಎಂ.ಜಿ ರಸ್ತೆಯಲ್ಲಿ ಸಿಕ್ಕರು. ವಕೀಲ ಎಂಬ ಕಾರಣಕ್ಕೆ ಮಾತನಾಡಿದೆ. ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿಸಲು ಕೇಳಿದ. ಆಗ ನಾನು ನೋಡೋಣಾ ಎಂದು ಹೇಳಿದೆ ಎಂದಿದ್ದಾರೆ.
ವಕೀಲ ದೇವರಾಜೇಗೌಡ ಪ್ರಜ್ವಲ್ ಪೆನ್ ಡ್ರೈವ್ ರಿಲೀಸ್ ಮಾಡಿದ್ದು ನಾನೇ ಎಂದಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಅವರು ಪರ್ಮಿಷನ್ ಕೊಟ್ಟಿದ್ದರು, ಬಿಜೆಪಿಯವರು ಕೂಡ ಬಿಡುಗಡೆ ಮಾಡಲು ಹೇಳಿದ್ದರು ಎಂದಿದ್ದಾರೆ. ಬಿಜೆಪಿ ನಾಯಕ ದೇವರಾಜೇಗೌಡ ಎರಡು ವರ್ಷದಿಂದ ಹೋರಾಟ ಮಾಡಿದ್ದಾರೆ. ಎರಡು ವರ್ಷದಿಂದ ಪೆನ್ ಡ್ರೈವ್ ಗೆ ಪ್ಲ್ಯಾನ್ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೆ ಎಂದು ಹೇಳಿದ್ದಾರೆ. ಜಗತ್ತಿನಲ್ಲಿಯೆ ಅತಿ ದೊಡ್ಡ ಲೈಂಗಿಕ ಹಗರಣ ಇದಾಗಿದೆ. ಡಿ.ಕೆ. ಶಿವಕುಮಾರ್ ಅವರಿಗೂ ಇದಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ.