2023ರ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠಯ ಕಣವಾಗಿದೆ. ಹೇಗಾದರೂ ಮಾಡಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಒದ್ದಾಡುತ್ತಿದ್ದರೆ, ಹೇಗೂ ಗುಜರಾತ್ ನಲ್ಲಿ ಹೊಸ ಸ್ಟಾಟರ್ಜಿಯೊಂದಿಗೆ ಗೆಲುವು ಪಡೆದ್ದಾಗಿದೆ. ಕರ್ನಾಟಕದಲ್ಲೂ ಅದನ್ನೇ ಬಳಕೆ ಮಾಡಿ ಗೆಲ್ಲುವುದು ಸುಲಭ ಎಂಬ ನಂಬಿಕೆಯಲ್ಲಿ ಬಿಜೆಪಿ ಪ್ರಚಾರದ ಕೆಲಸ ಮುಂದುವರೆಸಿದೆ.
ಇದೆಲ್ಲದರ ನಡುವೆ ಜೆಡಿಎಸ್ ತನ್ನ ಪಕ್ಷ ಸಂಘಟನೆಯನ್ನು ಭರ್ಜರಿಯಾಗಿಯೇ ಮಾಡುತ್ತಿದೆ. ಅದರಲ್ಲೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಕೋಟೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನದಲ್ಲಿದೆ ಜೆಡಿಎಸ್. ಈಗಾಗಲೇ ಅದಕ್ಕೆ ಗುದ್ದಲಿ ಪೂಜೆಯನ್ನು ಮಾಡಿಯಾಗಿದೆ. ಅದರ ಭಾಗವಾಗಿಯೇ ಚಾಮರಾಜಪೇಟೆಯಲ್ಲಿ 50ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರನ್ನು ಜೆಡಿಎಸ್ ಗೆ ಸೇರಿಸಿಕೊಂಡು ಆಗಿದೆ.
ಚಾಮರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು, ಮಾಜಿ ಉಪಮೇಯರ್ ರಾಮೇಗೌಡ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ಸ್ ಸೇರಿದಂತೆ ಅನೇಕರನ್ನು ತನ್ನತ್ತ ಸೆಳೆದುಕೊಂಡಿದೆ. ಕಳಪೆ ಕಾಮಗಾರಿ ವಿಚಾರದಲ್ಲಿ, ದೂರು ನೀಡಿದ್ದ ಲಿಂಗರಾಜು ಹತ್ಯೆಗೆ ಆಜಾದ್ ನಗರದ ವಾರ್ಡ್ ಕಾರ್ಪೋರೇಟರ್ ಆಗಿದ್ದ ಗೌರಮ್ಮ ಪತಿ ಗೋವಿಂದ ರಾಜು ಸುಪಾರಿ ನೀಡಿದ್ದರು ಎಂಬ ಆರೋಪವಿತ್ತು. ಈ ಆರೋಪದ ಮೇಲೆ ಜೈಲಿಗೂ ಹೋಗಿ ಬಂದಿದ್ದಾರೆ. ಇದೀಗ ಕಾಂಗ್ರೆಸ್ ನಿಂದ ಜೆಡಿಎಸ್ ಮನೆ ಬಾಗಿಲು ತಟ್ಟಿದ್ದಾರೆ.