ಕೋಲಾರ: ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಕಡೆಗೂ ಕೋಲಾರದಲ್ಲಿ ನಿಲ್ಲುವುದಾಗಿ ಘೋಷಣೆ ಮಾಡಿದ್ದಾರೆ. ವರುಣ ಅಥವಾ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದರೆ ಬಿಜೆಪಿಯಿಂದ ಟಫ್ ಕಾಂಪೀಟೇಷನ್ ನೋಡಬಹುದಿತ್ತು. ಆದರೆ ಸಿದ್ದರಾಮಯ್ಯ ಕೋಲಾರ ಆಯ್ಕೆ ಮಾಡಿಕೊಂಡಿದ್ದರಿಂದ ಆ ಸ್ಪರ್ಧೆ ತಪ್ಪಿದೆ. ಈಗ ಜೆಡಿಎಸ್ ಹಠ ಮಾಡಿದಂತೆ ಕಾಣುತ್ತಿದೆ.
ಕೋಲಾರದಲ್ಲಿ ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್ ರಣತಂತ್ರ ಎಣೆಯುತ್ತಿದೆ. ಯಾಕಂದ್ರೆ ಇದು ದಳಪತಿಗಳ ಭದ್ರಕೋಟೆಯೇ ಆಗಿದೆ. ಕಲೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಈ ಬಾರಿ ಇನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಬೇಕೆಂಬ ಲೆಕ್ಕಾಚಾರದಲ್ಲಿ ಇದೆ ಜೆಡಿಎಸ್.
ಈ ಬಗ್ಗೆ ತಮ್ಮ ಅಭಿಪ್ರಾಯ ಹೊರ ಹಾಕಿರುವ ಸಿ ಎಂ ಇಬ್ರಾಹಿಂ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆಲವರ ಬಲವಂತದಿಂದ ಇಲ್ಲಿಗೆ ಬಂದು ನಿಲ್ಲುತ್ತಿದ್ದಾರೆ. ಮುನಿಯಪ್ಪ ಸೋತಂತೆ ಸಿದ್ದರಾಮಯ್ಯ ಕೂಡ ಸೋಲುತ್ತಾರೆ. ಕೋಲಾರ ಜಿಲ್ಲೆ ಕಾಂಗ್ರೆಸ್ ಮುಕ್ತವಾಗಲಿದೆ. ಮುಸ್ಲಿಂ ಸಮುದಾಯದವರನ್ನು ತುಳಿದ ಕಾಂಗ್ರೆಸ್ ನವರನ್ನು ಅಲ್ಪಸಂಖ್ಯಾತರು ಕೈಹಿಡಿಯುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣ ಕೂಡ ಕೋಲಾರ ಕ್ಷೇತ್ರದ ಬಗ್ಗೆ ಮಾತನಾಡಿ, ಕೋಲಾರ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ನಂಟಸ್ತನವಿದೆ. ಅದು ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಆ ಭಾಗದಿಂದಾನೇ ಸ್ಪರ್ಧೆ ಮಾಡುವುದಾಗಿ ಒಮ್ಮೆ ಹೇಳಿದ್ದರು. ಸಿದ್ದರಾಮಯ್ಯ ಅವರು ಅಲ್ಲಿ ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ವಿಚಾರ. ಆದ್ರೆ ಅವರದ್ದೇ ಪಾರ್ಟಿಯವರು ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.