ಬೆಂಗಳೂರು: ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ʼನಮ್ಮ ಕ್ಲಿನಿಕ್ʼ ಮೂಲಕ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹದ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಸಿಟಿ ಸಮ್ಮಿಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಅಸಾಂಕ್ರಾಮಿಕ ರೋಗಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಇದರ ನಿರ್ವಹಣೆಗೆ ನಗರಗಳಲ್ಲಿ 438 ʼನಮ್ಮ ಕ್ಲಿನಿಕ್ʼಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಕೊಳೆಗೇರಿ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಕ್ಲಿನಿಕ್ ಆರಂಭಿಸಿ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳಿರುವ ಜನರ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಒಟ್ಟು ಮಧುಮೇಹಿಗಳಲ್ಲಿ 75% ಜನರು ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ. ಆದ್ದರಿಂದ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಮಧುಮೇಹ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ.
6,500 ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇವುಗಳ ಮೂಲಕ ಕೂಡ ಮಧುಮೇಹ ತಪಾಸಣೆ ಮಾಡಲಾಗುವುದು. 200 ಕ್ಕೂ ಅಧಿಕ ನಮ್ಮ ಕ್ಲಿನಿಕ್ ಸಿದ್ಧವಾಗಿದ್ದು, ತಿಂಗಳಾಂತ್ಯದಲ್ಲಿ ಬೇರೆ ಪ್ರದೇಶಗಳಲ್ಲಿ 100 ಹಾಗೂ ಒಂದು ವಾರದ ಬಳಿಕ ಬೆಂಗಳೂರು ನಗರದಲ್ಲಿ ಕ್ಲಿನಿಕ್ ಉದ್ಘಾಟಿಸಲಾಗುವುದು ಎಂದು ವಿವರಿಸಿದರು.
30 ವರ್ಷ ವಯಸ್ಸಿನ ಮಧುಮೇಹಿಯೊಬ್ಬರು ಗ್ಯಾಂಗ್ರಿನ್‌ನಿಂದ ಕಾಲಿಗೆ ಹಾನಿ ಮಾಡಿಕೊಂಡಿದ್ದರು. ಆದರೆ ಅವರಿಗೆ ಮಧುಮೇಹ ಇದೆ ಎಂಬುದೇ ಗೊತ್ತಿರಲಿಲ್ಲ. ಇಂತಹ ನಿರ್ಲಕ್ಷ್ಯ, ಜಾಗೃತಿಯ ಕೊರತೆ ಎಲ್ಲೆಡೆ ಕಂಡುಬರುತ್ತಿದೆ. ಪ್ರತಿ ವರ್ಷ ಆರೋಗ್ಯ ತಪಾಸಣೆಯನ್ನು ಕೂಡ ಜನರು ಮಾಡಿಕೊಳ್ಳುವುದಿಲ್ಲ. ಜನರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.