ರಾಯಚೂರು: ಇಂದು ಕೇತುಗ್ರಸ್ತ ಸೂರ್ಯಗ್ರಹಣವಿದೆ. ಎಲ್ಲಾ ದೇವಸ್ಥಾನಗಳಲ್ಲೂ ಬಾಗಿಲು ಸಾಕಲಾಗುತ್ತದೆ. ಗ್ರಹಣ ಮುಗಿಯುವ ತನಕ ಯಾವುದೇ ರೀತಿಯ ಪೂಜೆ ಪುನಸ್ಕಾರಗಳು ನಡೆಯುವುದಿಲ್ಲ. ದೇವರ ದರ್ಶನಕ್ಕೂ ಅವಕಾಶವಿರುವುದಿಲ್ಲ. ಆದರೆ ರಾಘವೇಂದ್ರ ಸ್ವಾಮಿ ಮಠ ಇದಕ್ಕೆ ಹೊರತಾಗಿದೆ. ಗ್ರಹಣ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ ಮಠ ಹಾಗೂ ರಾಯರ ಶಾಖಾ ಮಠಗಳಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ರಾಯರ ಬೃಂದಾವನ ನೋಡುವುದಕ್ಕೆ ಗ್ರಹಣ ಕಾಲದಲ್ಲೂ ಅವಕಾಶ ನೀಡಲಾಗಿದೆ. ಆದರೆ ದಿನನಿತ್ಯದ ಪೂಜೆಗೆ ಮಾತ್ರ ಬ್ರೇಕ್ ಹಾಕಲಾಗಿದೆ. ಗ್ರಹಣ ಮುಗಿದ ಮೇಲೆ ಮಠದಲ್ಲಿ ಶಾಂತಿ ಹೋಮ ನಡೆಸಲಾಗುವುದು. ಆದರೆ ಸೂರ್ಯಾಸ್ತದ ವೇಳೆಗೆ ಗ್ರಹಣ ಮುಕ್ತಾಯವಾಗುತ್ತಿದ್ದು, ಪೂಜೆಗಳು ನಡೆಯುವುದಿಲ್ಲ ಎಂದು ತಿಳಿಸಲಾಗಿದೆ.
ರಾಘವೇಂದ್ರ ಸ್ವಾಮಿಗಳ ಶಾಖಾ ಮಠ ಹಾಗೂ ಸತ್ಯನಾಥ ಕಾಲೋನಿಯ ಉತ್ತರಾಧಿ ಮಠದಲ್ಲಿ ಗ್ರಹಣದ ವೇಳೆ ಗ್ರಹಣ ಶಾಂತಿ ಹೋಮ ಹಾಗೂ ಗೋಗ್ರಾಸ ಹೋಮ ಜರುಗಲಿವೆ. ಗ್ರಹಣದ ಬಳಿಕ ದೇವಾಲಯ, ಮಠಗಳ ಸ್ವಚ್ಛತಾ ಕಾರ್ಯ ನಡೆಯಲಿದೆ.