ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ : 87220 22817
ಚಿತ್ರದುರ್ಗ(ಅ.06) : ಭಗವತಿ ಪಾರಾಯಣವನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಅಲ್ಲದೆ ಶ್ರದ್ದೆಯಿಂದ ಮಾಡಿದ ಪೂಜೆಯು ಸಹಾ ಮುಂದಿನ ದಿನದಲ್ಲಿ ಫಲವನ್ನು ನೀಡುತ್ತದೆ ಎಂದು ನಗರದ ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ನಗರದ ಕಬೀರಾನಂದಾಶ್ರಮದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿ ಮಹೋತ್ಸವ ಅಂಗವಾಗಿ ಶ್ರೀ ಭಗವತಿ ಭಗಳಾಂಭಕಾ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಮಾನವನಲ್ಲಿ ನಾನು ಎಂಬುಂದು ಬಹಳವಾಗಿದೆ. ಇದರಿಂದ ಆತ ಹಾಳಾಗುತ್ತಿದ್ದಾನೆ. ಭಗವತಿಯನ್ನು ಧಾನ್ಯಮಾಡುವುದರಿಂದ ಶಕ್ತಿ ಲಭಿಸುತ್ತದೆ. ಭಗವತಿಯ ಪುರಾಣವನ್ನು ಶ್ರದ್ದಾ ಭಕ್ತಿಯಿಂದ ಓದಿದರೆ ಸಿದ್ದಿಯಾಗುತ್ತದೆ. ಇದಕ್ಕೆ ಮಾನವರಾದ ನಾವುಗಳು ತಯಾರಾಗಬೇಕಿದೆ. ಶ್ರದ್ದೆ ಮತ್ತು ಮನಸ್ಸಿನ ನಿರ್ಧಾರ ಅತಿ ಮುಖ್ಯವಾಗಿದೆ. ದೇವಿಯ ನ್ಯಾಯಾಲಯದಲ್ಲಿ ಯವಾಗಲೂ ಶುದ್ದವಾದ ನ್ಯಾಯ ಸಿಗುತ್ತದೆ ಎಂದರು.
ಶ್ರದ್ದೆಯಿಂದ ಮಾಡಿದ ಪೂಜೆ ಮುಂದಿನ ದಿನಮಾನದಲ್ಲಿ ಫಲವನ್ನು ನೀಡುತ್ತದೆ. ಭಗವತಿಯ ಪಾರಾಯಣವನ್ನು ಮಾಡುವುದರಿಂದ ಉತ್ತಮವಾದ ಫಲ ಪ್ರಾಪ್ತಿಯಾಗುತ್ತದೆ. ಇದನ್ನು ನವರಾತ್ರಿ ಅಲ್ಲದೆ ವರ್ಷದ ಪೂರ್ತಿಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಿದೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ಕಲಿಸಬೇಕಿದೆ ಎಂದು ಶಿವಲಿಂಗಾನಂದ ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷ್ಣಾನಂದ ಶ್ರೀಗಳು ಮಾತನಾಡಿ, ದೇವಿಯ ಪೂಜೆಯನ್ನು ಮಾಡುವಾಗ ಯಾವುದೇ ರೀತಿಯ ಆಡಂಬರ ಬೇಕಿಲ್ಲ ನಿರ್ಮಲವಾದ ಭಕ್ತಿಯೊಂದು ಇದ್ದರೆ ಸಾಕು, ದೇವಿ ನಿಮ್ಮ ಭಕ್ತಿಗೆ ಮೆಚ್ಚಿ ಒಲಿಯುತ್ತಾಳೆ. ದೇವಿಯ ಪುರಾಣಯದ ಅಧ್ಯಯನದಿಂದ ವಿವಿಧ ಪುಣ್ಯಗಳು ಲಭ್ಯವಾಗಲಿದೆ. ಲಿಲಿತಸಹಸ್ರನಾಮವನ್ನು ಪ್ರತಿದಿನ ಪರಾಯಣ ಮಾಡುವುದರಿಂದ ವಿಶೇಷವಾದ ಶಕ್ತಿ ಲಭ್ಯವಾಗಲಿದೆ ಎಂದರು.
ಕಳೆದ 9 ದಿನಗಳ ಕಾಲವೂ ಆಶ್ರಮದಲ್ಲಿ ದೇವಿಯ ಪುರಾಯಣವನ್ನು ಪಾರಾಯಣ ಮಾಡಲಾಯಿತು. ಈರಣ್ಣ ಮಲ್ಲಾಪುರ ಗೊಲ್ಲರಹಟ್ಟಿ ಇವರು ದೇವಿಯ ಚರಿತ್ರೆಯನ್ನು ಪಾರಾಯಣ ಮಾಡಿದರೆ, ಹುರಳಿ ಬಸವರಾಜುರವರು ಚರೊತ್ರೆಯ ಪ್ರವಾಚಕರಾಗಿದ್ದರು. ಜನಪದ ಕಲಾವಿದ ಆಯಿತೋಳ್ ವಿರೂಪಾಕ್ಷಪ್ಪ, ಯಶವಂತ ಕುಮಾರ್, ಯುಗಧರ್ಮ ರಾಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.