ಚಿತ್ರದುರ್ಗ,(ಜು.18) : ನರೇಗಾದಡಿ ಹಳ್ಳಿಗಾಡಿನ ಜನರಿಗೆ ಕೆಲಸ ಒದಗಿಸುವುದರೊಂದಿಗೆ ಶಾಶ್ವತ ಹಾಗೂ ಜನೋಪಯೋಗಿ ಕಾರ್ಯಗಳನ್ನು ಕೈಗೊಳ್ಳುವ ಸದುದ್ದೇಶದಿಂದ ಸರ್ಕಾರ ಅಮೃತ ಸರೋವರ ಯೋಜನೆ ಜಾರಿಗೊಳಿಸಿದೆ.
ಪ್ರಾಕೃತಿಕ ಜಲ ಮೂಲಗಳನ್ನು ಸಂರಕ್ಷಣೆ ಮಾಡಿ, ಕೆರೆ ಕಟ್ಟೆಗಳ ಹೂಳು ತೆಗೆದು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಸಣ್ಣ ಹಿಡುವಳಿದಾರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸವ ನರೇಗಾ ಅಮೃತ ಸರೋವರ ಯೋಜನೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 75 ಜಲಮೂಲಗಳನ್ನು ಯೋಜನೆಯಡಿ ಅಭಿವೃದ್ಧಿ ಪಡಿಸಲು ಸರ್ಕಾರ ಜಿಲ್ಲಾ ಪಂಚಾಯಿತಿಗೆ ಗುರಿ ನೀಡಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 122 ಜಲಮೂಲಗಳನ್ನು ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲು ಗುರುತಿಸಲಾಗಿದೆ. ನರೇಗಾದಡಿ ನೀಡಿರುವ 75 ಜಲಮೂಲಗಳ ಗುರಿಯನ್ನು ಮೀರಿ ಹೆಚ್ಚಿನ ಸಾಧನೆ ತೋರುವ ಉಮೇದಿನಲ್ಲಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಾರ್ಯ ಆರಂಭಿಸಿದೆ.
ಆಜಾದಿ ಕ ಅಮೃತ ಮಹೋತ್ಸವ ಆಚರಿಸುವ ಆಗಸ್ಟ್ 15 ರ ಒಳಗಾಗಿ ಜಿಲ್ಲೆಯಲ್ಲಿ ಕನಿಷ್ಠ 20 ಜಲಮೂಲಗಳನ್ನು ಅಭಿವೃದ್ಧಿ ಪಡಿಸಿ ಆಗಸ್ಟ್ 15 ರಂದು ಜಲಮೂಲಗಳ ಬಳಿ ಧ್ವಜಾರೋಹಣ ನೆರವೇರಿಸಲಾಗುವುದು.
ಅಮೃತ ಸರೋವರ ಯೋಜನೆಯ ಮುಖ್ಯ ಇಂಜಿನೀಯರ್ ಕೆ.ಸಿ.ಮಲ್ಲಪ್ಪ, ಜಿಲ್ಲೆಗೆ ಈಚೆಗೆ ಆಗಮಿಸಿ ಚಿತ್ರದುರ್ಗ ತಾಲೂಕಿನ ಐನಹಳ್ಳಿ ಗ್ರಾಮ ಹಾಗೂ ಹಿರಿಯೂರು ತಾಲೂಕಿನ ಮರಡಿಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ ಸರೋವರ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ. ಜಿಲ್ಲೆಯ 6 ತಾಲ್ಲೂಕುಗಳಲ್ಲಿನ ಗ್ರಾಮಗಳ ಕೆರೆ/ಗೋಕಟ್ಟೆ ಸಮಗ್ರ ಅಭಿವೃದ್ಧಿ ಪಡಿಸುವಂತೆ ಪಂಚಾಯತ್ ರಾಜ್ ಇಂಜಿನಿಯರಿಗ್ ವಿಭಾದ ಅಧಿಕಾರಿಗಳು ಹಾಗೂ ಗ್ರಾ.ಪಂ. ಪಿಡಿಓಗಳಿಗೆ ಸೂಚನೆ ನೀಡಿದ್ದಾರೆ.
ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸ್ಥಳೀಯ ಸಂಸ್ಥೆಗಳ ಚುನಾಯಿತರು, ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು.
ಪೋಟೋ ವಿವರಣೆ: ಅಮೃತ ಸರೋವರ ಯೋಜನೆಯ ಮುಖ್ಯ ಇಂಜಿನೀಯರ್ ಕೆ.ಸಿ.ಮಲ್ಲಪ್ಪ, ಚಿತ್ರದುರ್ಗ ಜಿಲ್ಲೆ ಐನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ಮರಡಿಹಳ್ಳಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಗೋಕಟ್ಟೆ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು. ನರೇಗಾ ಕೂಲಿಕಾರರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಸೇರಿದಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಪಿ.ಆರ್.ಇ.ಡಿ. ಇಂಜಿನಿಯರ್‍ಗಳು, ತಾ.ಪಂ.ಸಹಾಯಕ ನಿರ್ದೇಶಕರು, ಜಿಲ್ಲಾ ಎಡಿಪಿಸಿ, ಐಇಸಿ ಸಂಯೋಜಕರು, ಪಿಡಿಓ ಹಾಗೂ ತಾಂತ್ರಿಕ ಸಹಾಯಕರು ಇದ್ದರು.