ಗ್ರಾಮಗಳ ಅಭಿವೃದ್ದಿ ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರ ಮೇಲಿದೆ:  ಕೃಷಿ ಸಚಿವ ಬಿ.ಸಿ.ಪಾಟೀಲ್

suddionenews
2 Min Read

ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರುಗಳಿಗೆ ನೀಡಿರುವ ಅಧಿಕಾರವನ್ನು ಸರಿಯಾಗಿ ಬಳಸಿಕೊಂಡು ಗ್ರಾಮಗಳನ್ನು ಅಭಿವೃದ್ದಿ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿಗೆ ಕರೆ ನೀಡಿದರು.

ಭರಮಸಾಗರ ಹೋಬಳಿಯ ಬ್ಯಾಲಹಾಳ್ ಗ್ರಾಮದಲ್ಲಿ ಶುಕ್ರವಾರ ಸರ್ಕಾರಿ ಶಾಲೆ ಕಟ್ಟಡ, ಸಿ.ಸಿ.ರಸ್ತೆ ಹಾಗೂ ಗ್ರಾಮಸೌಧ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳ ಅಭಿವೃದ್ದಿಯಾದಲ್ಲಿ ಮಾತ್ರ ರಾಮರಾಜ್ಯವಾಗಲು ಸಾಧ್ಯ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿ ಕನಸು ಕಂಡಿದ್ದರು. ಅದರಂತೆ ಗ್ರಾಮಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ನಿಮ್ಮ ಚಿಂತನೆಗಳಿರಬೇಕು.

ಸಿ.ಸಿ.ರಸ್ತೆ, ಸರ್ಕಾರಿ ಶಾಲೆ ಹಾಗೂ ಗ್ರಾಮಸೌಧವನ್ನು ಅತ್ಯಂತ ಗುಣಮಟ್ಟವಾಗಿ ನಿರ್ಮಿಸಿದ್ದೀರಿ. ಇದು ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮಗಳ ಅಭಿವೃದ್ದಿ ನಿಮ್ಮಗಳ ಕೈಯಲ್ಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಚೆಕ್‍ಗೆ ಸಹಿ ಹಾಕುವ ಅಧಿಕಾರ ನೀಡಿದೆ. ಅಂತಹ ಅಧಿಕಾರ ಮಂತ್ರಿಗಳಾದ ನಮಗೂ ಇಲ್ಲ. ಹಾಗಾಗಿ ನಿಮಗೆ ಸಿಕ್ಕಿರುವ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಗ್ರಾಮಗಳಲ್ಲಿ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ರಾಜ್ಯದಲ್ಲಿಯೆ ಅತ್ಯಂತ ಹೈಟೆಕ್ ರೀತಿಯಲ್ಲಿ ಗ್ರಾಮ ಪಂಚಾಯಿತಿ ನೂತನ ಗ್ರಾಮ ಸೌಧ ಕಟ್ಟಡ ನಿರ್ಮಿಸಿರುವುದು ನನಗೆ ಅತ್ಯಂತ ಖುಷಿಕೊಟ್ಟಿದೆ. ರಾಜ್ಯಕ್ಕೆ ಇದು ಮಾದರಿಯಾಗಿದೆ. ಇದೇ ರೀತಿ ಎಲ್ಲಾ ಪಂಚಾಯಿತಿಗಳಲ್ಲಿಯೂ ಗ್ರಾಮಸೌಧಗಳ ನಿರ್ಮಾಣವಾಗಬೇಕು. ಅದಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರುಗಳಲ್ಲಿ ಬದ್ದತೆಯಿರಬೇಕೆಂದರು.

ಕ್ರಿಯಾ ಯೋಜನೆಯನ್ನು ನೀವೇ ತಯಾರಿಸಿ ಹಣ ಮಂಜೂರು ಮಾಡಿಕೊಂಡು ಕಾಮಗಾರಿಗಳನ್ನು ಕೈಗೊಳ್ಳಬಹುದು. ಒಂದು ಕಾಲದಲ್ಲಿ ಗ್ರಾಮಗಳಿಗೆ ಅನುದಾನವನ್ನು ಮಂಜೂರು ಮಾಡಿಸಿಕೊಳ್ಳಬೇಕಾದರೆ ನಿಮ್ಮ ನಿಮ್ಮ ಕ್ಷೇತ್ರಗಳ ಶಾಸಕರುಗಳ ಹಿಂದೆ ಸುತ್ತಾಡಬೇಕಿತ್ತು.

ಈಗ ಅಂತಹ ಪರಿಸ್ಥಿತಿಯಿಲ್ಲ. ಎಲ್ಲಾ ಅಧಿಕಾರವೂ ನಿಮ್ಮ ಕೈಯಲ್ಲಿದೆ. ಗ್ರಾಮಸೌಧದಲ್ಲಿ ಕುಳಿತು ಅಧಿಕಾರವನ್ನು ಚಲಾಯಿಸಿ ನಿಜವಾದ ಬಡವರು, ಸೂರಿಲ್ಲದವರನ್ನು ಗುರುತಿಸಿ ನಿವೇಶನ, ಮನೆಗಳನ್ನು ಮಂಜೂರು ಮಾಡಬೇಕು. ಇಪ್ಪತ್ತೈದು ಸದಸ್ಯರುಗಳಿರುವ ಗ್ರಾಮ ಪಂಚಾಯಿತಿಗಳಿಗೆ 40 ಮನೆ, ಇಪ್ಪತೈದಕ್ಕೂ ಕಡಿಮೆ ಸದಸ್ಯರಿರುವ ಪಂಚಾಯಿತಿಗಳಿಗೆ 30 ಮನೆ ಹಾಗೂ ಹದಿನೈದು ಸದಸ್ಯರುಗಳಿರುವ ಪಂಚಾಯಿತಿಗೆ 20 ಮನೆಗಳನ್ನು ನೀಡಿದ್ದೇವೆ. ಅರ್ಹರಿಗೆ ತಲುಪಿಸಿ ಎಂದು ಹೇಳಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ ಕಳೆದ 22 ವರ್ಷಗಳಿಂದಲೂ ಶಾಸಕನಾಗಿ ಹೊಳಲ್ಕೆರೆ ಕ್ಷೇತ್ರದಲ್ಲಿ ಜನಸೇವೆ ಮಾಡಿಕೊಂಡು ಬರುತ್ತಿದ್ದೇನೆ. ಯಾವುದೇ ಅಧಿಕಾರ ಶಾಶ್ವತವಲ್ಲ. ಇರುವತನಕ ಎಲ್ಲರ ನೆನಪಿನಲ್ಲುಳಿಯುವಂತ ಕೆಲಸಗಳಾದರೆ ಅಷ್ಟೆ ಸಾಕು. 28 ಲಕ್ಷ ರೂ.ವೆಚ್ಚದಲ್ಲಿ ಬ್ಯಾಲಾಳು ಗ್ರಾಮ ಪಂಚಾಯಿತಿಯ ನೂತನ ಗ್ರಾಮ ಸೌಧ ಕಟ್ಟಡ ನಿರ್ಮಾಣ, ಹದಿನೈದು ಲಕ್ಷ ರೂ.ವೆಚ್ಚದಲ್ಲಿ ಸಿ.ಸಿ.ರಸ್ತೆ, ಚಿಕ್ಕಬೆನ್ನೂರು-ಬ್ಯಾಲಾಳು ರಸ್ತೆಗೆ ಪಿ.ಎಂ.ವೈ.ಜಿ.ಯೋಜನೆಯಲ್ಲಿ ಒಂದು ಕೋಟಿ ನೀಡಲಾಗಿದೆ.

ಹನ್ನೆರಡು ಲಕ್ಷ ರೂ.ವೆಚ್ಚದಲ್ಲಿ ಬ್ಯಾಲಾಳು ಗ್ರಾಮದಲ್ಲಿ ಶಾಲಾ ಕಟ್ಟಡಕ್ಕೆ ಅನುದಾನ ನೀಡಿದ್ದೇನೆ. ಮಾದರಿ ಗ್ರಾಮ ಪಂಚಾಯಿತಿಯಾಗಿರುವುದಕ್ಕೆ ಇಲ್ಲಿನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಲ್ಲಿನ ಕಾಳಜಿಯೇ ಕಾರಣ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನು ಉತ್ತಮವಾಗಿ ಕೆಲಸ ಮಾಡಿದರೆ ಜನರೆ ನಿಮ್ಮನ್ನು ಮರು ಆಯ್ಕೆ ಮಾಡುತ್ತಾರೆಂದರು.

ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಬ್ಯಾಲಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಓ.ಕೃಷ್ಣಮೂರ್ತಿ, ಉಪಾಧ್ಯಕ್ಷೆ ದ್ಯಾಮಕ್ಕ ದೇವೇಂದ್ರಪ್ಪ, ಸದಸ್ಯರುಗಳಾದ ಲಕ್ಷ್ಮಿದೇವಿ, ದೇವರಾಜ್, ಅನುಸೂಯಮ್ಮ ಮಹದೇವಪ್ಪ, ಪುಷ್ಪ ಚಂದ್ರಪ್ಪ, ಸುಜಾತ ಬಸವರಾಜಪ್ಪ, ಭಾಗ್ಯಮ್ಮ ಬಸವರಾಜಪ್ಪ, ಶೆಟ್ಟಮ್ಮಯಲ್ಲಪ್ಪ ಸಾಮಿಲ್ ಶಿವಣ್ಣ ವೇದಿಕೆಯಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *