ವಿಜ್ಞಾನದ ಅರಿವಿನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಡಾ.ಜಿ. ಎನ್ ಮಲ್ಲಿಕಾರ್ಜುನಪ್ಪ

1 Min Read

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 02 : ಯಾವುದೇ ದೇಶದ, ವ್ಯಕ್ತಿಯ ನಿಜವಾದ ಅಭಿವೃದ್ಧಿ ವಿಜ್ಞಾನದ ಬಗೆಗಿನ ಸರಿಯಾದ ಅರಿವಿನಿಂದ ಮಾತ್ರ ಸಾಧ್ಯ” ಎಂದು ಸಾಹಿತಿ, ಚಿಂತಕ ಹಾಗೂ ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ. ಎನ್ ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ಅವರು ಹಿರಿಯೂರಿನ ಗಿರೀಶ ಶಿಕ್ಷಣ ಮಹಾವಿದ್ಯಾಲಯ ಮತ್ತು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಸಹಯೋಗದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಖಗೋಳ ವಿಸ್ಮಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದರು.

ಬಾಹ್ಯಾಕಾಶದ ವಿದ್ಯಾಮಾನಗಳನ್ನು, ವಿಸ್ಮಯಗಳನ್ನು ದುರುಪಯೋಗಪಡಿಸಿಕೊಳ್ಳುವ ರೀತಿಯಲ್ಲಿ ಕಥೆಗಳನ್ನು ಹೆಣೆದು ಹೊಟ್ಟೆ ಹೊರೆವ ವರ್ಗ ಇಂದಿನ ಆಧುನಿಕ ಯುಗದಲ್ಲಿ ಭಯೋತ್ಪಾದಕ ರೀತಿಯಲ್ಲಿ ಮುಂದುವರೆದಿರುವುದು ಶೋಚನೀಯ. ಪೂಜೆ, ಯಜ್ಞ, ಹೋಮ ಹವನಾದಿಗಳ ಮೂಲಕ ಯಾವುದೇ ಭೌತಿಕ ಅಥವಾ ಭೌದ್ಧಿಕ ಪ್ರಗತಿ ಸಾಧ್ಯ” ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ C.M ತಿಪ್ಪೇಸ್ವಾಮಿ “ಶಿಕ್ಷಕರಿಗೆ ಮತ್ತು ಶಿಕ್ಷಕರಾಗುವ ಕನಸು ಹೊತ್ತು ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಕಲಿಯುವ ಪ್ರಶಿಕ್ಷಣಾರ್ಥಿಗಳಿಗೆ ಜ್ಞಾನ ವಿಜ್ಞಾನದ ಕೌಶಲ್ಯಗಳನ್ನು ಅದೆಷ್ಟು ಕಲಿಸಿದರೂ ಕಡಿಮೆಯೇ” ಎಂದು ಹೇಳಿದರು.

ಉಪನ್ಯಾಸ ನೀಡಿ ಮಾತನಾಡಿದ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ “ಖಗೋಳ ವಿಜ್ಞಾನ ಸತ್ಯಕ್ಕೆ ಹತ್ತಿರವಾದರೆ, ಅದನ್ನು ಅವಲಂಬಿಸಿ ಹೇಳುವ ಜ್ಯೋತಿಷ್ಯ ಕಾಲ್ಪನಿಕ ವ್ಯಾಖ್ಯಾನ ಮತ್ತು ವಿಶ್ಲೇಷಣೆ. ಆಕಾಶಕಾಯಗಳಲ್ಲಿನ ಯಾವುದೇ ಗ್ರಹ, ನಕ್ಷತ್ರಗಳು ಶ್ರೇಷ್ಠವೂ ಅಲ್ಲ, ಕಂಟಕವೂ ಅಲ್ಲ. ಅವುಗಳ ಬಗೆಗಿನ ಅರಿವು ನಮ್ಮನ್ನು ಮೌಢ್ಯಾಚರಣೆಗಳಿಂದ ದೂರವಿರಿಸುತ್ತದೆ. ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ”ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಎಂ. ಎ. ಸುಧಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೈನ್ಸ್ ಫೌಂಡೇಶನ್ ಚಿತ್ರದುರ್ಗ ನಿರ್ದೇಶಕರಾದ ಪ್ರೊ.ಈ.ರುದ್ರಮುನಿ, ಕೆ.ವಿ.ನಾಗಲಿಂಗರೆಡ್ಡಿ, ಉಪನ್ಯಾಸಕಿ ಶ್ರೀಮತಿ ಡಿ.ವೇದಾ ವೇದಿಕೆಯಲ್ಲಿದ್ದರು. ಉಪನ್ಯಾಸಕ ಹೆಚ್. ಮಂಜುನಾಥ್ ಪ್ರಾಸ್ತಾವಿಕ ಭಾಷಣ ಮಾಡಿದರು.ಉಪನ್ಯಾಸಕಿ ಮಂಜುಮುತ್ತು ನಿರೂಪಿಸಿ,ಉಪನ್ಯಾಸಕ ನಿಜಲಿಂಗಪ್ಪ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *