ಸುದ್ದಿಒನ್, ಚಿತ್ರದುರ್ಗ, ಜನವರಿ. 23 : ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗುರುವಾರ ಬೆಳಿಗ್ಗೆ ನಗರದ ಹೊರವಲಯದಲ್ಲಿನ ಮುರುಘಾಮಠ ಎದುರಿನ ಅರಸನಕೆರೆಗೆ ಭೇಟಿ ನೀಡಿ, ಅಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ, ಸಮಗ್ರ ಮಾಹಿತಿ ಪಡೆದುಕೊಂಡರು.
ಐತಿಹಾಸಿಕ ಚಿತ್ರದುರ್ಗ ನಗರಕ್ಕೆ ಇದೊಂದು ಉತ್ತಮ ಕೆರೆಯನ್ನಾಗಿಸಲು ಸದಾವಕಾಶವಿದೆ, ಇದನ್ನು ಒಳ್ಳೆಯ ಪ್ರವಾಸಿ ತಾಣವಾಗಿಸಬಹುದಾಗಿದೆ, ಕೆರೆಯ ಅಭಿವೃದ್ಧಿ ಕಾರ್ಯವನ್ನು ಗುಣಮಟ್ಟದಿಂದ, ಯೋಜನಾಬದ್ಧವಾಗಿ ಮಾಡಬೇಕು, ಇಲ್ಲಿ ವಾಯುವಿಹಾರ ಮಾಡಲು ವಾಕಿಂಗ್ ಪಾಥ್ ನಿರ್ಮಿಸಬೇಕು. ಅಭಿವೃದ್ಧಿ ಕಾಮಗಾರಿಯ ಸಮಗ್ರ ವಿವರವನ್ನು ಕಾಮಗಾರಿಯ ಸ್ಥಳದಲ್ಲಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಬೋರ್ಡ್ ಅಳವಡಿಸಿ ಪ್ರದರ್ಶಿಸಬೇಕು. ಕೆರೆಗೆ ಯಾವುದೇ ಕಾರಣಕ್ಕೂ ನಗರದ ಚರಂಡಿ ನೀರು, ಕಲುಷಿತ ನೀರು ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್ ಅವರು, ಪ್ರಾಧಿಕಾರದ ವತಿಯಿಂದ ಅರಸನಕೆರೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಜೀವನ್ ಪ್ರಕಾಶ್ ಎಂಬುವ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಲಾಗಿದೆ, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಲೋಕಾಯುಕ್ತ ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೇಕರ್ ಹಾಗೂ ಜಿ.ವಿ. ವಿಜಯಾನಂದ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಿ. ಎಂ. ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್, ಜಿಲ್ಲಾಧಿಕಾರಿ ವೆಂಕಟೇಶ್ ಟಿ, ಜಿ.ಪಂ. ಸಿಇಒ ಸೋಮಶೇಖರ್ ಎಸ್.ಜೆ., ಲೋಕಾಯುಕ್ತ ಅಧೀಕ್ಷಕ ವಾಸುದೇವರಾಮ, ಡಿವೈಎಸ್ಪಿ ಮೃತ್ಯುಂಜಯ, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.