ವಿಜಯಪುರ: ರಾಜ್ಯದ ಐತಿಹಾಸಿಕ ಸ್ಥಳವಾದ ತಾಳಿಕೋಟೆಯ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಇದೇ ವರ್ಷ ಕಾರ್ಯಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಕಟಿಸಿದರು.
ಕರ್ನಾಟಕದ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನ ಹೊಂದಿರುವ ತಾಳಿಕೋಟೆಯನ್ನು ಐತಿಹಾಸಿಕ ಪ್ರವಾಸೋದ್ಯಮ ಸ್ಥಳವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಲಿದ್ದು, ಶೀಘ್ರದಲ್ಲೇ ಆದೇಶ ಹೊರಡಲಿದೆ. ಜೊತೆಗೆ ತಾಳಿಕೋಟೆಯ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಇದೇ ವರ್ಷ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದರು.
ರಾಜ್ಯದಲ್ಲಿ 250 ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರೂಪಿಸುವ ಯೋಜನೆ ಜಾರಿಯಲ್ಲಿದೆ. ತಂಗಡಗಿ ಕೂಡ ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡ ಈ ಯೋಜನೆಗೆ ಸೇರಿಸಲು ತೀರ್ಮಾನಿಸಲಾಗಿದೆ. ತಾಳಿಕೋಟೆಯನ್ನು ಪ್ರವಾಸೋದ್ಯಮ ಕ್ಷೇತ್ರವಾಗಿಸುವುದರಿಂದ ಜನರು ಪ್ರವಾಸ ಮಾಡಿ ಚರಿತ್ರೆ ತಿಳಿಯಲು ನೆರವಾಗಲಿದೆ. ತಾಳಿಕೋಟೆಯಲ್ಲಿ ಯುದ್ಧ ನಡೆದ ಬಳಿಕ ಸಂಜೆ ಮಹಿಳೆಯರ ಮೇಲೆ ಕೂಡ ದೌರ್ಜನ್ಯ ನಡೆದಿತ್ತು. ಇಲ್ಲಿನ ಶಿಲ್ಪಿಗಳಾದ ಶಿವಕುಮಾರ ಸಕ್ರೆ ಅವರು ಎರಡು ಹಳ್ಳಿಯವರೊಡನೆ ಸೇರಿ ಯುದ್ಧದಲ್ಲಿ ಮಡಿದವರನ್ನು ಗೌರವಿಸುವ ಕೆಲಸ ಮಾಡಿದ್ದಾರೆ. ಈ ಸ್ಥಳಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಬೇಕಿದೆ ಎಂದರು.