ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 02 : ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪ್ರಮಾಣಪತ್ರಗಳಿಗೆ ಮಾತ್ರ ಬೆಲೆ ಇಲ್ಲ. ಅದಕ್ಕೆ ತಕ್ಕಂತೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ ಎಂದು ಶ್ರೀ ಹೆಚ್. ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಕೋಟೆ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ವಸಂತೋತ್ಸವ ಕಾರ್ಯಕ್ರಮ, 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು; ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ಒಳ್ಳೆಯದನ್ನೇ ಯೋಚಿಸುವುದು ಯಶಸ್ಸಿಗೆ ದಾರಿ ಎಂದು ತಿಳಿಸಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಡಾ. ಕೆ.ಪಿ. ನಾಗಭೂಷಣ ಶೆಟ್ಟಿ ಅವರು ಮಾತನಾಡಿ, ಒಬ್ಬ ಉತ್ತಮ ಶಿಕ್ಷಕರಾಗಲು ಅಗತ್ಯವಾದ ಗುಣಗಳು ಮತ್ತು ಕರ್ತವ್ಯಗಳ ಬಗ್ಗೆ ವಿವರಿಸಿದರು. ಮಹಾವಿದ್ಯಾಲಯದ ಕಾರ್ಯದರ್ಶಿ ಕೆ. ಶಾರದಾ ಅವರು 2025-26ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು.
2024-25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರಶಿಕ್ಷಣಾರ್ಥಿ ಜಿ.ಬಿ. ಉಮಾಮಣಿ ಅವರು ಮಾತನಾಡಿ, ಸೋಲಿನ ಭಯವಿಲ್ಲದೆ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮಂಜುಳಾ ಕೆ.ಬಿ. ಅವರು ಮಾತನಾಡಿ, “ಶಿಕ್ಷಣದ ಬೇರುಗಳು ಕಹಿಯಾಗಿದ್ದರೂ ಅದರ ಫಲ ಸಿಹಿಯಾಗಿರುತ್ತದೆ” ಎಂಬ ಅರಿಸ್ಟಾಟಲ್ ನುಡಿಯನ್ನು ಉಲ್ಲೇಖಿಸಿ, ಸಮಯದ ಮಹತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಜಿ. ಬಸವರಾಜಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಕೆ. ಮೋಹನ್ ಕುಮಾರ್, ಡಿ. ಸುದರ್ಶನ, ಎಸ್.ಟಿ. ಪದ್ಮಶ್ರೀ, ಎಂ. ಸ್ವಾತಿ, ಎಂ.ಜಿ.ಎಸ್. ರಾಘವೇಂದ್ರ, ಯೋಗ ಶಿಕ್ಷಕಿ ಹೇಮಾವತಿ ಪಿ., ದೈಹಿಕ ಶಿಕ್ಷಕ ಕೆ.ಟಿ. ರುದ್ರಮುನಿ, ಅಧೀಕ್ಷಕ ಮಲ್ಲೇಶಪ್ಪ ಹಾಗೂ ರಂಗಭೂಮಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ, ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಮಂಜುನಾಥ್ ನಿರೂಪಿಸಿದರು. ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
















