ಚಿತ್ರದುರ್ಗ, (ಫೆ.26) : ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ತಮ್ಮ ಜೀವನದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿಕೊಳ್ಳಿ. ಇದರಿಂದ ಮಾನವನ ಅಭಿವೃದ್ಧಿ ಸಾಧ್ಯ.” ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ Dr. ಎಚ್.ಗೋಪಾಲಪ್ಪ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಇಂದು ಕೇವಲ ಅಧ್ಯಯನ ಮಾಡಲು ಮಾತ್ರ ವಿಜ್ಞಾನ ವಿಷಯವನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ನಿತ್ಯಜೀವನದಲ್ಲಿ ವಿಜ್ಞಾನವನ್ನು ನಾವು ಅಪ್ಪಿಕೊಳ್ಳಬೇಕಾಗಿದೆ. ವೈಜ್ಞಾನಿಕತೆಯನ್ನು ಮರೆತು ಮೌಢ್ಯತೆಯನ್ನು ಅಪ್ಪಿಕೊಳ್ಳುತ್ತಿರುವುದು ತುಂಬಾ ವಿಷಾದನೀಯ. ವಿಜ್ಞಾನದ ಕೊಡುಗೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ”ಎಂದು ತಿಳಿ ಹೇಳಿದರು.
ರಾಜ್ಯ ಕ.ರಾ.ವಿ.ಪ ಮಾಜಿ ಉಪಾಧ್ಯಕ್ಷರಾದ ಚಳ್ಳಕೆರೆ ಯರ್ರಿಸ್ವಾಮಿ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಹತ್ವ” ಕುರಿತು ಉಪನ್ಯಾಸ ನೀಡುತ್ತಾ, ಸರ್.ಸಿ.ವಿ.ರಾಮನ್ ಬಿಟ್ಟರೆ ಇದುವರೆವಿಗೂ ವಿಜ್ಞಾನ ಕ್ಷೇತ್ರಕ್ಕೆ ನೊಬೆಲ್ ಪ್ರಶಸ್ತಿ ದೊರೆತಿಲ್ಲ. ವಿದ್ಯಾರ್ಥಿಗಳು ಮೂಲ ವಿಜ್ಞಾನವನ್ನು ಅಧ್ಯಯನ ಮಾಡುವುದರೊಂದಿಗೆ, ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಿ” ಎಂದು ಸಲಹೆ ನೀಡಿದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪರಿಷತ್ತು ಏರ್ಪಡಿಸಿದ್ದ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ತಂತ್ರಜ್ಞಾನದಲ್ಲಿ ಪಾತ್ರ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಹಿರಿಯೂರು ತಾ.ಪಾಲವ್ವನಹಳ್ಳಿಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಜಿ.ಆರ್.ರಮ್ಯಾ ಪ್ರಥಮ, ಚಿತ್ರದುರ್ಗದ ಜ್ಞಾನವಿಕಾಸ ಶಾಲೆಯ ವಿದ್ಯಾರ್ಥಿ ಎನ್.ಸಿದ್ದೇಶ್ ಹಾಗೂ ಚಳ್ಳಕೆರೆಯ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿ ಎನ್.ವೈ. ಆನಂದ್ ತೃತೀಯ ಬಹುಮಾನ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಕ.ರಾ.ವಿ.ಪ. ಜಿಲ್ಲಾ ಸಮಿತಿ ಅಧ್ಯಕ್ಷರಾದ ಎಂ.ಡಿ. ಲತೀಫ್, ಕಾಲೇಜಿನ IQAC ಸಂಯೋಜಕರಾದ Dr.ರಮೇಶ್ ರಟಗೇರಿ, ವಿಜ್ಞಾನ ಫೋರಂ ಸಂಯೋಜಕರಾದ Dr. A.B ಸತೀಶ್, ಜಿಲ್ಲಾ ಸಮಿತಿಯ ಸಹಕಾರ್ಯದರ್ಶಿ ನವೀನ್ ಆಚಾರ್ ಉಪಸ್ಥಿತರಿದ್ದರು.