ಕಳೆದ ಕೆಲ ದಿನಗಳಿಂದ ದೇವೇಗೌಡರ ಕುಟುಂಬದಲ್ಲಿ ಟಿಕೆಟ್ ನದ್ದೆ ಸದ್ದು ಸುದ್ದಿ. ಆ ಕಡೆ ಭವಾನಿ ರೇವಣ್ಣ ನಾನೇ ಹಾಸನ ಅಭ್ಯರ್ಥಿ ಅಂದ್ರೆ ಈ ಕಡೆ ಕುಮಾರಸ್ವಾಮಿ ಭವಾನಿ ಅವರೇ ನಿಲ್ಲಬೇಕು ಎಂಬ ಅನಿವಾರ್ಯತೆ ಇಲ್ಲ ಎನ್ನುತ್ತಿದ್ದರು. ಇದು ಬಿಜೆಪಿ ಪಕ್ಷಕ್ಕೆ ದೊಡ್ಡ ಆಹಾರವಾಗಿತ್ತು. ಅದೇ ಕಾರಣಕ್ಕೆ ನಳಿನ್ ಕುಮಾರ್ ಕಟೀಲು, ಈಶ್ವರಪ್ಪ ಸೇರಿದಂತೆ ಹಲವರು ಭವಾನಿ ರೇವಣ್ಣ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನ ಮಾಡಿದ್ದರು. ಇದೀಗ ಅದೆಲ್ಲದಕ್ಕೂ ಟಾಂಗ್ ನೀಡಿದ್ದಾರೆ ದೊಡ್ಡ ಗೌಡರ ಕುಟುಂಬ.
ಟಿಕೆಟ್ ವಿಚಾರಕ್ಕೆ ಎದ್ದಿದ್ದ ಭಿನ್ನಾಭಿಪ್ರಾಯಗಳನ್ನೆಲ್ಲಾ ಮರೆತು ದೊಡ್ಡ ಗೌಡರ ಕುಟುಂಬ ಒಗ್ಗಟ್ಟನ್ನು ಪ್ರದರ್ಶಿಸಿದೆ. ಹೊಳೆನರಸೀಪುರದಲ್ಲಿ ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಭವಾನಿ ರೇವಣ್ಣ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಗರ್ತಿಯಲ್ಲಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವನ್ನು ದೇವೇಗೌಡರ ಕುಟುಂಬ ನಿಂತು ನೆರವೇರಿಸಿಕೊಟ್ಟಿದ್ದಾರೆ.
ಒಟ್ಟಿಗೆ ದೀಪ ಬೆಳಗಿದ್ದಾರೆ, ಒಟ್ಟಿಗೆ ಒಂದೇ ವಾಹನದಲ್ಲಿ ರೋಡ್ ಶೋ ನೆರವೇರಿಸಿದ್ದಾರೆ. ಈ ಮೂಲಕ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲವೆಂದು ತೋರಿಸಿದ್ದಾರೆ. ಸದ್ಯ ಕುಟುಂಬದಲ್ಲು ಮೇಲ್ನೋಟಕ್ಕೆ ಟಿಕೆಟ್ ವಿಚಾರ ಶಮನವಾದಂತೆ ಕಾಣುತ್ತಿದೆ. ಆದರೆ ಹಾಸನ ಟಿಕೆಟ್ ಯಾರ ಪಾಲಾಗಬಹುದು ಎಂಬ ಪ್ರಶ್ನೆ ಎದ್ದಿದೆ.