ಬೆಂಗಳೂರು: ದೊಡ್ಡಗೌಡರ ಮನೆಯಲ್ಲಿ ಇನ್ನು ಬೇಸರದ ಛಾಯೆ ಆರಿಲ್ಲ. ಯೋಚನೆ, ನೋವಲ್ಲಿಯೇ ಇದ್ದಾರೆ. ಯಾಕಂದ್ರೆ ಮಾಜಿ ಪ್ರಧಾನಿಗಳ ಕುಟುಂಬದಲ್ಲಿ ಇಂಥದ್ದೊಂದು ಅಪವಾದ ಬಂದರೆ ಸಹಿಸುವುದಾದರೂ ಹೇಗೆ..? ದೇವೇಗೌಡರಿಗೆ ಈಗಾಗಲೇ 91 ವರ್ಷ ವಯಸ್ಸಾಗಿದೆ. ಅವರ ಆರೋಗ್ಯದ ಕಾಳಜಿಯೂ ಬಹಳ ಮುಖ್ಯವಾಗುತ್ತದೆ. ಇದೇ ನೋವಲ್ಲಿ ಇದೀಗ ದೇವೇಗೌಡ ಅವರು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಮೇ 18ಕ್ಕೆ ದೇವೇಗೌಡರ ಹುಟ್ಟಿದ ಹಬ್ಬ. 91 ತುಂಬಿ 92 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಆದರೆ ಈ ಬಾರಿ ಕಾರಣಾಂತರಗಳಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ದೇವೇಗೌಡರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳು, ಕಾರ್ಯಕರ್ತರು ಮನೆ ಮುಂದೆ ಸಾಲುಕಟ್ಟಿ ನಿಲ್ಲುತ್ತಾರೆ, ಶುಭಕೋರಲು ಬರುತ್ತಾರೆ. ಈ ಬಾರಿ ಆ ಖುಷಿಯ ಸಂಭ್ರಮವಿಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನೊಂದಿರುವ ದೊಡ್ಡಗೌಡ್ರು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಪತ್ರ ಬರೆದಿದ್ದು, ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ ಎಲ್ಲರೂ ಇದ್ದಲ್ಲಿಯೇ ಶುಭಹಾರೈಸಬೇಕು ಎಂದು ಕೇಳಿಕೊಂಡಿದ್ದಾರೆ.
ಜೊತೆಗೆ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕರೆಕೊಟ್ಟಿದ್ದಾರೆ. ಆದರೆ ಈ ಬಾರಿಯ ಹುಟ್ಟುಹಬ್ಬವನ್ನು ದೇವೇಗೌಡರು ಆಚರಿಸಿಕೊಳ್ಳದೇ ಇರುವುದು ಕಾರ್ಯಕರ್ತರಿಗೂ ಬೇಸರ ತರಿಸಿದೆ. ಆದರೆ ಇದ್ದಲ್ಲಿಯೇ ಶುಭಾಶಯ ಕೋರುವುದಕ್ಕೆ ಕೋರಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ದೇವೇಗೌಡರ ಕುಟುಂಬಕ್ಕೆ ಮುಜುಗರವನ್ನುಂಟು ಮಾಡಿದೆ. ರೇವಣ್ಣ ಅವರೇನೋ ಜೈಲಿನಿಂದ ಹೊರಗೆ ಬಂದರು, ಆದರೆ ಪ್ರಜ್ವಲ್ ಮಾತ್ರ ಇನ್ನು ರಾಜ್ಯಕ್ಕೆ ಬರದೆ ಅಲ್ಲಿಯೇ ಉಳಿದಿದ್ದಾರೆ.