ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ವಯಸ್ಸೇನು ಕಡಿಮೆಯಲ್ಲ. ಆದರೂ ಇಷ್ಟು ವಯಸ್ಸಾದರೂ ಪಕ್ಷಕ್ಕಾಗಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಾರೆ. ಕುಮಾರಸ್ವಾಮಿ ಅವರು ಸಿಎಂ ಆಗಲಿ ಎಂದು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಈಗ 2023ರ ಚುನಾವಣೆ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಾರುಪತ್ಯವಿದೆ. ಇಲ್ಲಿ ಕಮಲ ಅರಳಿಸಬೇಕೆಂದು ಬಿಜೆಪಿ ಹೈಕಮಾಂಡ್ ನಾಯಕರು ಬಂದು ಹೋಗಿ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪ್ರಧಾನಿ ಮೋದಿಯವರು ಮಂಡ್ಯ ಭಾಗದಲ್ಲಿ ದೊಡ್ಡಮಟ್ಟದ ರೋಡ್ ಶೋ ನಡೆಸಿದ್ದಾರೆ. ಈ ರೋಡ್ ಶೋಗೆ ಟಕ್ಕರ್ ಕೊಡೋದಕ್ಕೆ ದೇವೇಗೌಡರ ನೇತೃತ್ವದಲ್ಲಿ ರೋಡ್ ಶೋ ಆಯೋಜನೆ ಮಾಡಲಾಗಿತ್ತು. ಆದರೆ ದೊಡ್ಡ ಗೌಡರ ಆರೋಗ್ಯ ದೃಷ್ಟಿಯಿಂದ ಅದು ರದ್ದಾಗಿದೆ.
ರಾಜ್ಯದ 85 ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಪೂರ್ಣಗೊಂಡಿದೆ. ಮಾರ್ಚ್ 26ರಂದು ಬೃಹತ್ ಸಮಾವೇಶ ನಡೆಸಲಿದ್ದು, ಸುಮಾರು ಹತ್ತು ಲಕ್ಷ ಮತದಾರರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ಇದೇ ಮಾರ್ಚ್ 26ರಂದೇ ದೇವೇಗೌಡ ಅವರು ಕುಂಬಳಗೋಡಿನಿಂದ ಮೈಸೂರು ತನಕ ರೋಡ್ ಶೋ ನಡೆಸಲು ಯೋಜಿಸಿದ್ದರು. ಆದರೆ ವೈದ್ಯರ ಸಲಹೆ ಮೇರೆಗೆ ಈ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.