ರಾಜಕಾರಣಿಗಳಿಗೆ ಸುಮ್ಮನೆ ಕೂರುವುದೆಂದರೆ ಕಷ್ಟ. ಸದಾ ಆಕ್ಟೀವ್ ಆಗಿನೇ ಇರುತ್ತಾರೆ. ಅದಕ್ಕೆ ಪಕ್ಕಾ ಉದಾಹರಣೆ ಎಂದರೆ ದೊಡ್ಡಗೌಡ್ರು. ಮೂತ್ರ ಸೋಂಕಿನಿಂದ ದೇವೇಗೌಡರನ್ನ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ವೈದ್ಯರ ಚಿಕಿತ್ಸೆಗೆ ಸ್ಪಂದಿಸಿದ ದೇವೇಗೌಡ ಅವರು, ಈಗ ಡಿಸ್ಚಾರ್ಜ್ ಆಗಿದ್ದಾರೆ. ಆರಾಮಾಗಿ ಮನೆಗೆ ಹೋಗಿದ್ದಾರೆ. ಆದರೆ ಈಗಲೂ ರಾಜಕೀಯದತ್ತ ಯೋಚನೆ ಮಾಡಿದ್ದಾರೆ. ಅದರಲ್ಲೂ ಕಲ್ಯಾಣ ಕರ್ನಾಟಕದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡರವರು ಗುಣಮುಖರಾಗಿ ಇಂದು ಮನೆಗೆ ಮರಳಿದ್ದಾರೆ. ವೈದ್ಯರ ಸೂಚನೆಯಂತೆ ಶ್ರೀ ದೇವೇಗೌಡರಿಗೆ ಇನ್ನೂ 15 ದಿನ ವಿಶ್ರಾಂತಿ ಅಗತ್ಯವಿದೆ. ಹೀಗಾಗಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭೇಟಿ ಮಾಡಲು ಅವರ ನಿವಾಸಕ್ಕೆ ದಯವಿಟ್ಟು ತೆರಳಬೇಡಿ ಎಂದು ವಿನಂತಿ. ಪೂಜ್ಯ ದೇವೇಗೌಡರು ವಿಶ್ರಾಂತಿ ಬಳಿಕ, ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನಕ್ಕೆ ಖುದ್ದು ಆಗಮಿಸಿ ಎಲ್ಲರನ್ನೂ ಭೇಟಿಯಾಗಲಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ ಆ ಭಾಗದಲ್ಲೆಲ್ಲಾ ದೊಡ್ಡ ಮಟ್ಟಕ್ಕೆ ಪ್ರವಾಹದ ಸಮಸ್ಯೆ ಎದುರಾಗಿದೆ. ಕೇಂದ್ರ ಸರ್ಕಾರದಿಂದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕೆಂದು ದೇವೇಗೌಡ ಅವರು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಹ್ಲಾದ್ ಜೋಷಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ನಾನು ಕೂಡ ಪ್ರಧಾನಿ ಮೋದಿ ಅವರ ಜೊತೆಗೆ ಮಾತನಾಡುತ್ತೇನೆ. ನೀವು ಪ್ರಧಾನಿ ಮೋದಿ ಅವರ ಜೊತೆಗೆ ಮಾತನಾಡಿ ಎಂದು ಪ್ರಹ್ಲಾದ್ ಜೋಷಿ ಅವರು ದೇವೇಗೌಡರಿಗೆ ಹೇಳಿದ್ದಾರೆ.

