ಮಾನಸಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು : ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಜೆಡಿಎಸ್

suddionenews
1 Min Read

 

ಬೆಂಗಳೂರು: ವೈಎಸ್ ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಈಗಾಗಲೇ ದಿನ ಕೂಡ ನಿಗದಿಯಾಗಿದೆ. ಈ ಬಗ್ಗೆ ಇಂದು ಜೆಡಿಎಸ್ ಟ್ವೀಟ್ ಮಾಡಿದೆ. ಅದು ಭಾವನಾತ್ಮಕವಾಗಿ ಟ್ವೀಟ್ ಮಾಡಿರುವುದು ವಿಶೇಷ. ರಾಜ್ಯದ ಅಗ್ರಮಾನ್ಯ ನಾಯಕರು, ಮಾಜಿ ಪ್ರಧಾನಮಂತ್ರಿಗಳು ಆಗಿರುವ ಶ್ರೀ @H_D_Devegowdaರ ‘ ಮಾನಸಪುತ್ರ ‘ ಎಂದೇ ಖ್ಯಾತಿ ಆಗಿರುವ ಶ್ರೀ @YSV_Datta ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ, ಕೈ ಹಿಡಿಯಲು ಅವರು ದಿನವನ್ನೂ ನಿಗದಿ ಮಾಡಿಕೊಂಡಿದ್ದಾರೆ ಎನ್ನುವುದು ಸದ್ಯದ ಸುದ್ದಿ.

ಬಹುತೇಕ ಕಡೆ ದೇವೇಗೌಡರ ‘ಮಾನಸಪುತ್ರ’ ಜೆಡಿಎಸ್ ತೊರೆದು ಹೋಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ‘ಮಾನಸಪುತ್ರ’ ಎನ್ನುವ ಪದವೇ ಹೆಚ್ಚು ಸದ್ದು ಮಾಡುತ್ತಿದೆ. ದತ್ತಾ ಅವರು ಗೌಡರಿಗೆ ಮಾನಸಪುತ್ರ. ಪುತ್ರರಾಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ದೇವೇಗೌಡರು ಮಾತ್ರ ನಿಜಕ್ಕೂ ದತ್ತಾ ಅವರನ್ನು ಹೆತ್ತ ಮಗನಿಗಿಂತ ಹೆಚ್ಚು ಸಲುಹಿದ್ದರು.

ಅಂತಹ @YSV_Datta, ಮಾನಸಪುತ್ರನೆಂದು ಖ್ಯಾತಿಯ ಜತೆಗೆ ಸಕಲವನ್ನೂ ಸಂಪಾದನೆ ಮಾಡಿಕೊಂಡ ಮೇಲೆ ಸಲುಹಿದ, ಕಷ್ಟ ಬಂದಾಗ ಕಾಪಾಡಿದ, ಕಠಿಣ ಸಂದರ್ಭಗಳಲ್ಲಿ ಕಣ್ರೆಪ್ಪೆಯಂತೆ ಪೊರೆದ, ಅನೇಕ ಸಲ ಜನ್ಮಕೊಟ್ಟ ತಂದೆಗಿಂತ ಗಟ್ಟಿಯಾಗಿ ಜತೆಗೆ ನಿಂತು ಮುಳುಗೇ ಹೋಗುತ್ತಿದ್ದ ಬದುಕನ್ನು ಬದುಕಿಸಿಕೊಟ್ಟ ‘ಮಾನಸ ತಂದೆ’ ಯನ್ನು ಮರೆತು, ತೊರೆಯುತ್ತಿದ್ದರೆ?

ಮಾನಸಪುತ್ರನನ್ನು ಇನ್ನೊಬ್ಬ ಪುತ್ರನೆಂದೇ ನಂಬಿದ್ದರು ದೇವೇಗೌಡರು. ನಂಬಿ ಪಕ್ಕದಲ್ಲಿ ಇಟ್ಟುಕೊಂಡರು. ಕೇಳಿದ್ದೆಲ್ಲಾ ಕೊಟ್ಟರು, ಕೇಳದಿದ್ದರೂ ಕೊಟ್ಟರು. ಪ್ರೀತಿ, ವಿಶ್ವಾಸ ಎಲ್ಲವನ್ನೂ ಧಾರೆ ಎರೆದರು. ಆದರೆ ಇವತ್ತು ಮಾನಸಪುತ್ರ ಎಲ್ಲವನ್ನೂ ಮರೆತು ಕೃತಜ್ಞತಾಹೀನರಾಗಿ ಅದೇ ಗೌಡರಿಗೆ ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಸೇರುತ್ತಿದ್ದಾರೆ.

ಮಾನಸಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ, ಪ್ರೀತಿ ಎಂದರೆ ಲಾಭದ ದಾರಿ, ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ರಾಜಮಾರ್ಗ. ಅಂಥ ಮಾನಸಪುತ್ರನ ಬಗ್ಗೆ ಗೌಡರು ಕೊರಗುವುದಿಲ್ಲ. ಏಕೆಂದರೆ, ಪಕ್ಷದ ಎಲ್ಲಾ ನಾಯಕರು, ಕಟ್ಟ ಕಡೆಯ ಕಾರ್ಯಕರ್ತನೂ ಮಾಜಿ ಪ್ರಧಾನಿಗಳ ಮಾನಸಪುತ್ರರೇ.. ಢೋಂಗಿ ಮಾನಸಪುತ್ರರನ್ನು ಮರೆ ಲೇಸು. ಅಲ್ಲವೇ? ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *