ಚಿತ್ರದುರ್ಗ(ಆಗಸ್ಟ್ 20): ಹಿಂದುಳಿದ ದುರ್ಬಲ ವರ್ಗಗಳ ಜನರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜು ಅರಸು ಕೊಡುಗೆ ಅಪಾರ. ಡಿ.ದೇವರಾಜು ಅರಸು ಅವರು ಶೋಷಿತ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸಿದರು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
50 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ವಿರೋಧಗಳಿಲ್ಲದೆ, ಜನರ ಮನಸ್ಸು ಗೆದ್ದಂತಹ ರಾಜಕೀಯ ವ್ಯಕ್ತಿ ಡಿ.ದೇವರಾಜ ಅರಸು. ಅವರ ಅಧಿಕಾರ ಅವಧಿಯಲ್ಲಿ ನಿಷ್ಠೆಯಿಂದ, ದಣಿದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಆಡಳಿತದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದಂತಹ ದಕ್ಷ ಮತ್ತು ಪ್ರಾಮಾಣಿಕ ವ್ಯಕ್ತಿ ಡಿ.ದೇವರಾಜ ಅರಸು. ಅವರ ಸಂದೇಶಗಳು ಮತ್ತು ಅವರು ನಡೆದ ಬಂದ ಹಾದಿಯನ್ನು ನಾವು ಅನುಸರಿಸಿ ನಡೆಯಬೇಕು. ನಾವು ಉತ್ತಮವಾದ ಸ್ಥಳದಲ್ಲಿ ವಾಸಿಸುತ್ತಿದ್ದೇವೆ ಮತ್ತು ಉತ್ತಮವಾದ ಹಾಸ್ಟೆಲ್ ಸೌಲಭ್ಯಗಳನ್ನು ಪಡೆದಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಡಿ .ದೇವರಾಜ ಅರಸು ಎಂದು ಬಣ್ಣಿಸಿದರು.
ಜಮೀನ್ದಾರಿ ವ್ಯವಸ್ಥೆಯ ವಿರುದ್ಧ ಸಮರ ಸಾರಿ ಭೂ ಸುಧಾರಣೆ ಕಾಯ್ದೆಯಲ್ಲಿ ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾಯ್ದೆ ಜಾರಿಗೆ ತರುವ ಮೂಲಕ ಭೂರಹಿತರು, ಶ್ರಮಿಕ ವರ್ಗದವರು ಭೂಮಿ ಹೊಂದುವಂತಹ ಅವಕಾಶ ಮಾಡಿಕೊಟ್ಟ ಮಹಾನ್ ಧೀಮಂತ ನಾಯಕ ಅರಸು ಅವರು ಎಂದರು.
ಡಿ.ದೇವರಾಜ ಅರಸು ಅವರು ಅಧಿಕಾರದ ಅವಧಿಯಲ್ಲಿ ಸಾಮೂಹಿಕ ನೀರಾವರಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಿ, ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸ್ವಾವಲಂಬಿಯಾಗಲು ಶ್ರಮಿಸಿದರು. ರೈತಾಪಿ ಜೀವನವೂ ಅಲ್ಲದೆ ಸಾಮಾಜಿಕ ನ್ಯಾಯದ ಹರಿಕಾರರಾಗಿಯೂ ಆಡಳಿತ ನಡೆಸಿದ ಮುಖ್ಯಮಂತ್ರಿ ಅಂದರೆ ಅದು ಡಿ.ದೇವರಾಜ ಅರಸು ಮಾತ್ರ. ಹಿಂದುಳಿದವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಹಿಂದುಳಿದವರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಹಿಂದುಳಿದ ವರ್ಗಗಳ ವಸತಿಶಾಲೆಗಳನ್ನು ಸ್ಥಾಪಿಸುವುದರ ಮೂಲಕ ಬಡವರ ಮಕ್ಕಳ ಶಿಕ್ಷಣದ ಭವಿಷ್ಯಕ್ಕೆ ನೆರವು ನೀಡಿದ್ದಾರೆ ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಧ್ಯಾಪಕ ಕರಿಯಪ್ಪ ಮಾಳಿಗೆ ಉಪನ್ಯಾಸ ನೀಡಿ, ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗದೇ ಇದ್ದಿದ್ದರೆ ಹಿಂದುಳಿದ ವರ್ಗದವರಾದ ನಾವು ಇಂತಹ ಉತ್ತಮ ಸ್ಥಿತಿಯಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿದ್ದಾರೆ. ಕಡಿಮೆ ಶುಲ್ಕ, ಉತ್ತಮ ಸೌಲಭ್ಯಗಳನ್ನು ಹೊಂದಿದ ಹಾಸ್ಟೆಲ್‍ಗಳು ಇವೆಲ್ಲವೂ ಅರಸು ಅವರ ಕೊಡೆಗೆಗಳು ಎಂದರು.
ಸದಾ ನೊಂದವರ ಬಗ್ಗೆ ಯೋಚಿಸುತ್ತಾ ಗ್ರಾಮೀಣ ಭಾಗದ ಜನರಿಗೆ ಶಕ್ತಿ ನೀಡಿ ಸಾಮಾಜಿಕ, ಆರ್ಥಿಕವಾಗಿ ಬದುಕುವಂತೆ ಮಾಡಿ ಆತ್ಮಸ್ಥೈರ್ಯ ತುಂಬಿದವರು. ಕತ್ತಲೆಯಲ್ಲಿದ್ದವರಿಗೆ ಬೆಳಕು ನೀಡಬೇಕು ಎಂದು ಭಾಗ್ಯ ಜ್ಯೋತಿ ಯೋಜನೆ ಜಾರಿಗೆ ತಂದರು. ಅರಸು ಅವರು ಹಸಿದ ಸಮುದಾಯಗಳ ಬಗ್ಗೆ ಸದಾ ಯೋಚಿಸುತ್ತಿದ್ದರು ಎಂದರು.
ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ಜಿಲ್ಲಾ ಮಟ್ಟದ ಡಿ. ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಮೊಳಕಾಲ್ಮೂರಿನ ಡಿ.ಎಂ. ಈಶ್ವರಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉತ್ತಮ ಸೇವೆ ಸಲ್ಲಿಸುತ್ತಿರುವ ನಿಲಯ ಮೇಲ್ವಿಚಾರಕರುಗಳಾದ ಆನಂದ್‍ರಾಜ್, ಶಕೀಲಾ, ಕಚೇರಿಯ ಮುಖ್ಯಸ್ಥ ಮಂಜುನಾಥ್ ರೆಡ್ಡಿ, ಅಡುಗೆ ಸಿಬ್ಬಂದಿ ಶ್ರೀನಿವಾಸ್‍ಗೆ ಸನ್ಮಾನಿಸಿ ಗೌರವಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ದಿವ್ಯ ಮತ್ತು ಮೇಘನಾ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ತಿಮ್ಮರಾಜುಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ವೆಂಕಟೇಶಯ್ಯ, ಹಿರಿಯ ಪತ್ರಕರ್ತ ಹೆಂಜಾರಪ್ಪ, ವಕೀಲರಾದ ಸೌಮ್ಯ ಹಾಗೂ ವಿದ್ಯಾರ್ಥಿಗಳು ಭಾಗಿಯಾದ್ದರು. ಕಾರ್ಯಕ್ರಮದ ಅಂಗವಾಗಿ ವಿವಿಧ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಗರದ ನೀಲಕಂಠೇಶ್ವರ ದೇವಸ್ಥಾನ ಬಳಿಯಿಂದ, ಪ್ರಮುಖ ರಸ್ತೆಯ ಮೂಲಕ, ತ.ರಾ.ಸು. ರಂಗಮಂದಿರದವರೆಗೂ ವಿಜೃಂಭಣೆಯಿಂದ ನಡೆಸಲಾಯಿತು. ವಿವಿಧ ಕಲಾ ತಂಡಗಳು ಪಾಲ್ಗೊಂಡು, ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕವನ್ನಾಗಿಸಿದವು.