ಬೆಂಗಳೂರು: ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ವರ್ತನೆಗೆ ಕಿಡಿಕಾರಿದ್ದಾರೆ.
ಬಿಜೆಪಿಗೆ ಸಂಸದೀಯ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ನಂಬಿಕೆ. ಬಿಜೆಪಿಯವರು ಪ್ರಜಾಪ್ರಭುತ್ವದ ವಿರೋಧಿಗಳು. ಸದನದಲ್ಲಿ ನಿನ್ನೆ ಬಿಜೆಪಿಯವರ ನಡವಳಿಕೆ ಬಗ್ಗೆ ಏನಂತ ಕರೆಯಬೇಕು. ಬಿಜೆಪಿಯವರನ್ನು ಅನಾಗರೀಕರು ಅಂತ ಕರೆಯಬೇಕು. ನಾನು ಯಾವತ್ತಿಗೂ ಇಂತಹ ಅನಾಗರಿಕ ವರ್ತನೆಯನ್ನು ನೋಡಿಲ್ಲ. ಪಾಪ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಮುಖವೇ ಸಪ್ಪೆ ಆಗಿ ಹೋಗಿದೆ. ಯೋಚನೆ ಮಾಡಬೇಡಿ, ನಾವು ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದ್ದೇವೆ.
ಮಾರ್ಷಲ್ ಇಲ್ಲದಿದ್ದರೆ ಡೆಪ್ಯೂಟಿ ಸ್ಪೀಕರ್ ಮೇಲೆ ಹಲ್ಲೆ ಮಾಡುತ್ತಿದ್ದರೇನೋ..? ಲೋಕಸಭೆ ಚುನಾವಣೆಯಲ್ಲಿ ನಾವು ಕನಿಷ್ಠ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ನಾವು ಕೊಟ್ಟ ಗ್ಯಾರಂಟಿಗಳಿಂದ ಜನರು ಸಂತೋಷವಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಸಭೆಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಇಂಡಿಯಾ ಹೆಸರಲ್ಲಿ ಒಂದಾಗಿದ್ದನ್ನು ಕಂಡು ಸಹಿಸದೆ ಕ್ಯಾತೆ ತೆಗೆದಿದ್ದಾರೆ.
ಯಾವ ಪ್ರಧಾನಿ ಇಷ್ಟು ಬಾರಿ ಚುನಾವಣೆ ಪ್ರಚಾರ ಮಾಡಿಲ್ಲ. ಅದು ಒಂದು ಅಸೆಂಬ್ಲಿ ಚುನಾವಣೆಗೆ ಇಷ್ಟೊಂದು ಪ್ರಚಾರ ಮಾಡಿಲ್ಲ. ಮೈಸೂರು, ಬಾದಾಮಿ, ಬೆಂಗಳೂರು ಸೇರಿ ಹಲವೆಡೆ ಮೋದಿ ಪ್ರಚಾರ ಮಾಡಿದ್ದಾರೆ. ಅವರು ಪ್ರಚಾರ ಮಾಡಿದ ಕಡೆಯಲ್ಲೆಲ್ಲಾ ನಾವೇ ಗೆದ್ದಿದ್ದೇವೆ. ಕೇಶವ ಕೃಪದವರು ನೋಡಲಿ ಅಂತ ಬಿಜೆಪಿಯವರ ನಾಟಕ. ಇವರು ಯಾವುದೇ ಚುನಾವಣೆಗಳಲ್ಲೂ ಹೆಚ್ಚು ಮತ ಪಡೆದಿಲ್ಲ. ನಮ್ಮ ಮತಗಳ ಶೇಕಡವಾರು ಜಾಸ್ತಿಯಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬರಬಾರದು. ಬಿಜೆಪಿ ಯಾವಾಗಲೂ ವಿಪಕ್ಷವಾಗಿ ಇರಬೇಕು. ನಾನು ಬಿಜೆಪಿ ಮುಕ್ತ ಭಾರತ ಆಗಲಿ ಅಂತ ಹೇಳುವುದಿಲ್ಲ. ಬಿಜೆಪಿ ಅವನತಿ ಕರ್ನಾಟಕದಿಂದ ಶುರುವಾಗಿದೆ ಎಂದಿದ್ದಾರೆ.