ಡೆಂಗ್ಯೂ ಪರೀಕ್ಷೆ  : ಖಾಸಗಿ ಲ್ಯಾಬ್‍ಗಳು ವಿಧಿಸುವ ದರ ಸಾರ್ವಜನಿಕರಿಗೆ ಹೊರೆಯಾಗದಿರಲಿ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

1 Min Read

ಚಿತ್ರದುರ್ಗ. ಜುಲೈ13 : ಡೆಂಗ್ಯೂ ಪರೀಕ್ಷೆಗೆ ಖಾಸಗಿ ನರ್ಸಿಂಗ್ ಹೋಂ, ಲ್ಯಾಬ್‍ಗಳು ವಿಧಿಸುವ ದರದ ಬಗ್ಗೆ ನಿಗಾವಹಿಸಿ, ಸರ್ಕಾರ ನಿಗಧಿಪಡಿಸಿದ ದರ ಮಾತ್ರವೇ ತೆಗೆದುಕೊಳ್ಳಬೇಕು. ಸಾರ್ವಜನಿಕರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಡೆಂಗ್ಯೂ ಜ್ವರ ನಿಯಂತ್ರಣ ಕ್ರಮಕ್ಕಾಗಿ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ನಗರದ ಖಾಸಗಿ ಲ್ಯಾಬ್‍ಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ವಹಿಸಿ, ಡೆಂಗ್ಯೂ ಮುಂಜಾಗ್ರತಾ ಕ್ರಮಕ್ಕಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಿ ಸಹಕಾರ ಪಡೆಯಿರಿ. ಡೆಂಗ್ಯೂ ಹಾಟ್‍ಸ್ಪಾಟ್ ಗುರುತಿಸಿ ಚಿಕಿತ್ಸೆ ಸಮೀಕ್ಷೆ ಇತರೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖಾ ಮುಖ್ಯಸ್ಥರು ಎಲ್ಲಾ ಶಾಲೆಗಳಲ್ಲಿ ಮಕ್ಕಳ ಮೂಲಕ ಡೆಂಗ್ಯೂ ಜಾಗೃತಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಶಿಕ್ಷಣ ನಡೆಸಲು ಕ್ರಮ ವಹಿಸುವಂತೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಸಾಂಕ್ರಾಮಿಕ ರೋಗಗಳ ನಿರ್ವಾಹಣಾ ತಂಡದವರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *