ನವದೆಹಲಿ : ನೋಟುಗಳ ಅಮಾನ್ಯೀಕರಣವು ಕಾನೂನುಬಾಹಿರವಾಗಿದೆ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಹೇಳಿದ್ದಾರೆ.
ನೋಟು ಅಮಾನ್ಯೀಕರಣದ ಕುರಿತು ಕೇಂದ್ರದ 2016ರ ಕುರಿತು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ನೇತೃತ್ವದ ಬಿಆರ್ ಗವಾಯಿ, ಎಎಸ್ ಬೊಪ್ಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಇಂದು ತೀರ್ಪು ಪ್ರಕಟಿಸಿದೆ. ಆದರೆ ನ್ಯಾಯಮೂರ್ತಿ ಬಿವಿ ನಾಗರತ್ನ ಮಾತ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಆರ್‌ಬಿಐ ಕಾಯ್ದೆಯ ಸೆಕ್ಷನ್ 26(2)ರ ಅಡಿಯಲ್ಲಿ ಕೇಂದ್ರದ ಅಧಿಕಾರಗಳ ವಿಷಯದಲ್ಲಿ ಬಹುಮತದ ತೀರ್ಪಿನಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ₹ 500 ಮತ್ತು ₹ 1,000 ಸರಣಿಯ ನೋಟುಗಳ ರದ್ದತಿಯನ್ನು ಶಾಸನದ ಮೂಲಕ ಮಾಡಬೇಕೇ ಹೊರತು ಅಧಿಸೂಚನೆಯ ಮೂಲಕ ಅಲ್ಲ ಎಂದು ಅವರು ಹೇಳಿದರು.
ನ್ಯಾಯಮೂರ್ತಿ ನಾಗರತ್ನ ಅವರು ಮಾತ್ರ ₹ 500 ಮತ್ತು ₹ 1,000 ಕರೆನ್ಸಿ ನೋಟುಗಳ ಅಮಾನ್ಯೀಕರಣವು ಕಾನೂನುಬಾಹಿರವಾಗಿದೆ. ನೋಟು ಅಮಾನ್ಯೀಕರಣದ ಕಾನೂನನ್ನು ಸಂಸತ್ತಿನಲ್ಲಿ ಚರ್ಚಿಸಬೇಕಿತ್ತು, ಗೆಜೆಟ್ ನೋಟಿಫಿಕೇಶನ್ ಮೂಲಕ ಪ್ರಕ್ರಿಯೆ ಮಾಡಬಾರದಿತ್ತು ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ.
ಆದರೆ, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ, ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ಸಮಾಲೋಚನೆ ನಡೆಯುತ್ತಿರುವುದರಿಂದ ಕೇಂದ್ರದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ದೋಷಪೂರಿತವಾಗಿರಲು ಸಾಧ್ಯವಿಲ್ಲ ಎಂದು ಹೇಳಿದೆ.
ನವೆಂಬರ್ 8, 2016 ರಂದು ಕೇಂದ್ರವು ಘೋಷಿಸಿದ ನೋಟು ಅಮಾನ್ಯೀಕರಣದ ಕ್ರಮವನ್ನು ಪ್ರಶ್ನಿಸಿ 58 ಅರ್ಜಿಗಳು ವಿಚಾರಣೆಗೆ ಬಂದಿದ್ದವು. ಅಂತಿಮವಾಗಿ ಇಂದು ಸುಪ್ರೀಂ ಕೋರ್ಟ್‌ನ ತೀರ್ಪು ಬಂದಿದೆ.
ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ ನವೆಂಬರ್ 8, 2016 ರ ಅಧಿಸೂಚನೆಯು ಅಸಮಂಜಸವೆಂದು ಹೇಳಲಾಗುವುದಿಲ್ಲ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಆಧಾರದ ಮೇಲೆ ಅದನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.