ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 05 : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸುವ ರಾಜ್ಯ ಬಜೆಟ್ ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ಕನಿಷ್ಟ ಐವತ್ತು ಸಾವಿರ ಕೋಟಿ ರೂಪಾಯಿ ನಿಗಧಿ ಮಾಡಿ ಅದರಲ್ಲಿ ಭದ್ರಾ ಮೇಲ್ಡಂಡೆಗೆ ನಾಲ್ಕು ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹಿಸಿದೆ.
ಇಲ್ಲಿನ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಸಂಘಟನೆಯಾದ ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿ ಬಯಲು ಸೀಮೆ ಜನರ ವಂಚಿಸಿದ ಕೇಂದ್ರದ ಮಾದರಿಯಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನೇತಾರ ಸಿದ್ದರಾಮಯ್ಯ ಕೂಡಾ ಬಯಲು ಸೀಮೆ ಜನರಿಗೆ ಮಹಾ ದ್ರೋಹವೆಸಗಿದ್ದು ಈ ಬಾರಿಯ ಬಜೆಟ್ ನಲ್ಲಿ ತಾವು ಎಸಗಲಾದ ತಪ್ಪನ್ನು ತಿದ್ದಿಕೊಂಡು ಅನುದಾನ ಬಿಡುಗಡೆ ಮಾಡಬೇಕೆಂದು ವಿನಂತಿಸಿದರು.
ಕಳೆದ 2025-26 ನೇ ಸಾಲಿನ ಬಜೆಟ್ ನಲ್ಲಿ ಸ್ವತಹ ವಿತ್ತ ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಭದ್ರಾ ಮೇಲ್ದಂಡೆಗೆ ಕೇಂದ್ರದ ಒಂದು ಸಾವಿರ ಕೋಟಿ ಅನುದಾನ ನಿರೀಕ್ಷಿಸಿ ಕೇವಲ 250 ಕೋಟಿ ರೂಪಾಯಿ ಅನುದಾನ ಕಾಯ್ದರಿಸಿದ್ದರು. ಅಚ್ಚರಿ ಎಂದರೆ ಕೇಂದ್ರ ಸರ್ಕಾರ ಅನುಮೋದಿಸದ, ಕೇಂದ್ರ ಸಂಪುಟ ಒಪ್ಪಿಗೆ ನೀಡದ ಹಾಗೂ ಸರ್ಕಾರಿ ಆದೇಶವಾಗದ ಯೋಜನೆಯ ತೋರಿಸಿ ಬಯಲು ಸೀಮೆ ಜನರ ವಂಚನೆ ಮಾಡಲಾಗಿತ್ತು. ಕೃಷಿ ಸಂಚಯಿನಿ ಯೋಜನೆಯಡಿ ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಸಾವಿರ ಕೋಟಿ ರೂಪಾಯಿ ನೀಡುತ್ತದೆ ಎಂಬ ಅದೃಶ್ಯ ಅಂಶದ ಅನುದಾನವ ಹಂಚಿಕೆಯಲ್ಲಿ ತೋರಿಸಿ ರಾಜ್ಯದ ಪಾಲಿನ 250 ಕೋಟಿ ರೂಪಾಯಿ ಅದಕ್ಕೆ ಸೇರ್ಪಡೆ ಮಾಡಲಾಗಿತ್ತು. ರಾಜ್ಯ ಸರ್ಕಾರ ಮಾಡಿದ ಮಹಾ ದ್ರೋಹ ಇದೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಲಿನ ಬಜೆಟ್ ನಲ್ಲಿ ಜಲ ಸಂಪನ್ಮೂಲ ಇಲಾಖೆಗೆ ರಾಜ್ಯ ಸರ್ಕಾರ ಒಟ್ಟು 18826 ಕೋಟಿಯಷ್ಟು ಅಲ್ಪ ಪ್ರಮಾ್ಣದ ಅನುದಾನ ನಿಗದಿ ಮಾಡಿತ್ತು. ಇದರಲ್ಲಿ ಕೃಷ್ಣ ಭಾಗ್ಯಜಲ ನಿಗಮಕ್ಕೆ 5349 ಕೋಟಿ, ಕಾವೇರಿ ನೀರಾವರಿ ನಿಗಮಕ್ಕೆ 3171 ಕೋಟಿ, ಕರ್ನಾಟಕ ನೀರಾವರಿ ನಿಗಮಕ್ಕೆ 4087 ಕೋಟಿ ಹಾಗೂ ಭದ್ರಾ ಮೇಲ್ದಂಡೆ ವ್ಯಾಪ್ತಿಗೆ ಒಳಪಡುವ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ 3830 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ವಿದ್ಯುತ್ , ಸಾಲದ ಮರು ಪಾವತಿ, ಬಡ್ಡಿ ಸೇರಿದಂತೆ ಎಲ್ಲ ಬಾಬತ್ತುಗಳ ಸೇರಿದ ಮೊತ್ತ ಇದಾಗಿತ್ತು.
ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಂಚಿಕೆ ಮಾಡಲಾದ 3839 ಕೋಟಿಯಲ್ಲಿ ಎತ್ತಿನ ಹೊಳೆ ಹಾಗೂ ಭದ್ರಾ ಮೇಲ್ದಂಡೆಯಂತಹ ಎರಡು ಪ್ರಮುಖ ಯೋಜನೆಗಳು ಬರುತ್ತವೆ. ವಿಶ್ವೇಶ್ವರಯ್ಯ ನೀರಾವರಿ ನಿಗಮಕ್ಕೆ ಇದುವರೆಗೂ ಮಾಡಲಾದ ಸಾಲಕ್ಕೆ ಅಸಲು 902 ಕೋಟಿ ಹಾಗೂ ಬಡ್ಡಿ ರೂಪದಲ್ಲಿ 95 ಕೋಟಿ ಹಾಗೂ ವಿದ್ಯುತ್ ವೆಚ್ಚ10.29 ಕೋಟಿ ರೂಪಾಯಿ ಪಾವತಿಸುವ ಬಾಬತ್ತು ತೋರಿಸಲಾಗಿದೆ. ಕೇಂದ್ರದ ನಿರೀಕ್ಷಿತ ಸಾವಿರ ಕೋಟಿ ನಮೂದಿಸಲಾಗಿದೆ. ಇದರೊಟ್ಟಿಗೆ ಭೂ ಸ್ವಾಧೀನಕ್ಕೆ 600 ಕೋಟಿ ನೀಡಲಾಗಿದೆ. ಹಂಚಿಕೆ ಮಾಡಲಾದ ಮೊತ್ತದಲ್ಲಿ ಈ ಬಾಬತ್ತನ್ನು ಕಳೆದರೆ 2607 ಕೋಟಿಯಷ್ಟಾಗುತ್ತದೆ. ಅಂದರೆ 3830 ಕೋಟಿ ರು ನಲ್ಲಿ 2607 ಕೋಟಿ ಅನುದಾನ ಹೋದಲ್ಲಿ ಕಾಮಗಾರಿಗೆ ಸಿಗುವುದು ಕೇವಲ 1223 ಕೋಟಿ ರೂಪಾಯಿ ಮಾತ್ರ. ಇದರಲ್ಲಿ ನಿಗಮದ ಸಂಬಳ, ಸಾರಿಗೆ ವೆಚ್ಚವೂ ಸೇರುತ್ತದೆ.
ಭದ್ರಾ ಮೇಲ್ದಂಡೆಗೆ ಜನವರಿ 2026ರ ಅಂತ್ಯದ ವೇಳೆಗೆ ಒಟ್ಟು 11345 ಕೋಟಿ ರೂಪಾಯಿ ವೆಚ್ಚವಾಗಿದೆ. 2025-26 ಸಾಲಿನಲ್ಲಿ ಒಟ್ಟಾರೆ ರಾಜ್ಯ ಸರ್ಕಾರದಿಂದ 650 ಕೋಟಿ ರು ಅನುದಾನ ಮಾ್ತ್ರ ಬಿಡುಗಡೆಯಾಗಿದೆ. 2026 ಫೆಬ್ರವರಿ ಅಂತ್ಯಕ್ಕೆ ಒಟ್ಟು 1896 ಕೋಟಿ ರೂಪಾಯಿ ಬಾಕಿ ಬಿಲ್ಲುಗಳಿವೆ.
ರಾಜ್ಯ ಸರ್ಕಾರೋ ಭದ್ರಾ ಮೇಲ್ದಂಡೆಗೆ ಕೃಷಿ ಸಂಚಾಯಿನಿಯೋಜನೆಯಡಿ ಕೇಂದ್ರದ ಅನುದಾನ ನಿರೀಕ್ಷಿಸಿ 21167 ಕೋಟಿ ರೂಪಾಯಿ ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಯನ್ನು ಸಲ್ಲಿಸಿದೆ. ಹಾಗೊಂದು ವೇಳೆ ಕೇಂದ್ರ ಇದಕ್ಕೆ ಒಪ್ಪಿಗೆ ಸೂಚಿಸಿ, ಸಂಪುಟದಲ್ಲಿ ಅನುಮೋದಿಸಿದರೆ ಕೇಂದ್ರ ಸರ್ಕಾರ ಶೇ.60 ರಷ್ಟು ಅನುದಾನ ನೀಡಬೇಕಾಗಿ ಬರುತ್ತದೆ. ಉಳಿದ 40 ರಷ್ಟು ರಾಜ್ಯ ಸರ್ಕಾರ ಭರಿಸಬೇಕಾಗಿದೆ. ಹಾಗಾಗಿ ಮುಂಬರುವ ಬಜೆಟ್ ನಲ್ಲಿ ರಾಜ್ಯ ಸರ್ಕಾರ ಐವತ್ತು ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಜಲ ಸಂಪನ್ಮೂಲ ಇಲಾಖೆಗೆ ನಿಗಧಿಪಡಿಸಿ ಅದರಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿ ಅನುದಾನವ ಭದ್ರಾ ಮೇಲ್ದಂಡೆಗೆ ಹಂಚಿಕೆ ಮಾಡಬೇಕೆಂದು ಹಂಪಯ್ಯನಮಾಳಿಗೆ ಧನಂಜಯ ಆಗ್ರಹಿಸಿದರು.
ನೀರಾವರಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಮುಖಂಡರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್ ಬಾಬು,ವಿರುಪಾಕ್ಷಪ್ಪ, ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.




