ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 07 : ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರ ಆರನೆ ಗ್ಯಾರೆಂಟಿಯಾಗಿ ಗೌರವ ಧನ ಹೆಚ್ಚಿಸದೆ ರಾಜ್ಯದ ಮುಖ್ಯಮಂತ್ರಿ ಬಜೆಟ್ನಲ್ಲಿ ಸೀರೆ ಕೊಟ್ಟು ಅವಮಾನಿಸಿರುವುದನ್ನು ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಶಿರಸ್ತೆದಾರ್ ಮಂಜುನಾಥ್ರವರ ಮೂಲಕ ಸಿದ್ದರಾಮಯ್ಯನವರಿಗೆ ಮನವಿ ಅರ್ಪಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ, ಎಐಟಿಯುಸಿ ಸಹಯೋಗದೊಂದಿಗೆ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ರಾಜ್ಯ ಬಜೆಟ್ನಲ್ಲಿ ಹೆಚ್ಚು ಅನುದಾನ ಮೀಸಲಿಟ್ಟಿದೆಯೆ ವಿನಃ ಯಾವುದೇ ಜೀವನ ಭದ್ರೆತೆಯಿಲ್ಲದೆ ಹತ್ತಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ನಮಗೆ ಗೌರವ ಧನ ನೀಡದೆ ಸೀರೆ ಕೊಟ್ಟು ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ. ಸೀರೆಗಾಗಿ ಮೀಸಲಿಟ್ಟಿರುವ ಹಣವನ್ನು ಗೌರವ ಧನ ಹೆಚ್ಚಳಕ್ಕೆ ಬಳಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಒತ್ತಾಯಿಸಿದರು.
ಎಐಟಿಯುಸಿ. ಜಿಲ್ಲಾಧ್ಯಕ್ಷೆ ಕಾಂ.ಎಸ್.ಭಾಗ್ಯಮ್ಮ, ಪ್ರಧಾನ ಕಾರ್ಯದರ್ಶಿ ಕಾಂ.ಎಂ.ಸಾವಿತ್ರಮ್ಮ, ಖಜಾಂಚಿ ಕಾಂ.ಪಿ.ಕೆ.ವಿನೋದಮ್ಮ, ಕಾಂ.ಸತ್ಯಕೀರ್ತಿ, ಎನ್.ರಾಧಮ್ಮ
ಸುಮಿತ್ರಾಬಾಯಿ, ಕೆ.ಟಿ.ಸುಜಾತ, ಮಹೇಶ್ವರಿ, ಗೀತಾಂಜಲಿ, ಸಿ.ತಿಪ್ಪಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




