ಬೆಂಗಳೂರು; ಖಾಲಿ ಇರುವ ವಿಧಾನಪರಿಷತ್ ಸದಸ್ಯ ಸ್ಥಾನ ತುಂಬುವ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರ ಬಳಿ ಈ ಬಗ್ಗೆ ಮನವಿ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್, ರಾಹುಲ್ ಗಾಂಧಿ ಅವರೊಂದಿಗೆ ಈ ಸಂಬಂಧ ಚರ್ಚೆ ನಡೆಸಿದ್ದಾರೆ. ಸಮುದಾಯದ ನಾಯಕರುಗಳಿಗೆ ಪರಿಷತ್ ಸದಸ್ಯತ್ವ ಸ್ಥಾನ ನೀಡಬೇಕೆಂದು ಸೂಚನೆ ನೀಡಿದ್ದಾರೆ. ಹಾಗಾದ್ರೆ ಸಿಎಂ ಹೆಸರಿಟ್ಟಿರೋ ಆ ಮಂದಿ ಯಾರ್ಯಾರು ಎಂಬ ಡಿಟೈಲ್ ಇಲ್ಲಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರ ಜೊತೆಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದು, ವಿಧಾನಪರಿಷತ್ ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಮುಖ್ಯವಾಗಿ ಈ ಸಮುದಾಯದ ನಾಯಕರನ್ನೇ ಪರಿಗಣಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸಂಭಾವ್ಯರ ಪಟ್ಟಿಯನ್ನು ನೀಡಲಾಗಿದೆ ಎನ್ನಲಾಗಿದೆ. ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದ್ಯಕ್ಕೆ 33 ಸ್ಥಾನಗಳನ್ನು ಹೊಂದಿದೆ. ಈ ನಾಲ್ವರು ನಾಮನಿರ್ದೇಶನಗೊಂಡ ಬಳಿಕ 37 ಸ್ಥಾನಗಳಾಗಲಿವೆ. ಈ ಮೂಲಕ ಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಗಲಿದೆ.

ಒಕ್ಕಲಿಗ ಸಮುದಾಯದಿಂದ ಬಿ.ಎಲ್.ಶಂಕರ್, ರಘುನಂದನ್ ರಾಮಣ್ಣ, ವಿನಯ್ ಕಾರ್ತಿಕ್ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಬಿ.ಎಲ್.ಶಂಕರ್ ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡಿ, ಸಭಾಪತಿ ಸ್ಥಾನ ಕೊಡಬೇಕು ಎಂಬ ಚಿಂತನೆಯಲ್ಲಿ ಸಿದ್ದರಾಮಯ್ಯ ಅವರು ಇದ್ದಾರಂತೆ. ಈ ವಿಚಾರದಲ್ಲಿ ಒಕ್ಕಲಿಗ ಸಮುದಾಯದ ಕೋಟಾ ಬಿಟ್ಟುಕೊಡಲು ಡಿ.ಕೆ.ಶಿವಕುಮಾರ್ ಅವರೂ ರೆಡಿ ಇಲ್ಲ ಎಂದು ತಿಳಿದುಬಂದಿದೆ.

