ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಸುದ್ದಿಒನ್, ಚಿತ್ರದುರ್ಗ, (ನ.14): ವಿಧಾನಪರಿಷತ್‍ನ 25 ಸ್ಥಾನಗಳಿಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗಬೇಕಾಗಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಿಳಿಸಬೇಕೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಜನಸ್ವರಾಜ್ ಸಮಾವೇಶದ ಅಂಗವಾಗಿ ಭಾರತೀಯ ಜನತಾಪಾರ್ಟಿ ಚಿತ್ರದುರ್ಗ ಗ್ರಾಮಾಂತರ ಮಂಡಲದಿಂದ ಅಮೋಘ ಹೋಟೆಲ್‍ನಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ನ.18 ರಂದು ತುರುವನೂರು ರಸ್ತೆಯಲ್ಲಿರುವ ರೆಡ್ಡಿ ಸಮುದಾಯ ಭವನದಲ್ಲಿ ನಡೆಯುವ ಜನಸ್ವರಾಜ್ ಸಮಾವೇಶಕ್ಕೆ ಸದಸ್ಯರುಗಳ ಮನವೊಲಿಸಿ ಕರೆತರುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ. ವಿಧಾನಸಭೆಯಲ್ಲಿ ಪಾಸಾದ ಬಿಲ್‍ಗಳು ವಿಧಾನಪರಿಷತ್‍ನಲ್ಲಿ ಪಾಸ್ ಆಗಬೇಕಾಗಿರುವುದರಿಂದ ಅಲ್ಲಿಯೂ ನಮ್ಮ ಪಕ್ಷಕ್ಕೆ ಬೆಂಬಲವಿರಬೇಕಾಗಿರುವುದರಿಂದ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ದೇಶದ ಪ್ರಧಾನಿ ನರೇಂದ್ರಮೋದಿರವರು ಹಳ್ಳಿಗಳ ಅಭಿವೃದ್ದಿಗಾಗಿ ನೇರವಾಗಿ ಗ್ರಾಮ ಪಂಚಾಯಿತಿಗೆ ಅನುದಾನ ನೀಡಿ ವಿಶೇಷವಾದ ಅಧಿಕಾರ ಒದಗಿಸಿದ್ದಾರೆ. ಜಲಜೀವನ್ ಮಿಷನ್ ಸೇರಿದಂತೆ ಅನೇಕ ಯೋಜನೆಗಳನ್ನು ಹಳ್ಳಿಗಳಿಗೆ ನೀಡಿದೆ ಎಂದರು.
ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜೇಷ್ಠ ಪಡಿವಾಳ್‍ಜಿ ಮಾತನಾಡಿ ಚುನಾವಣೆ ಪಕ್ಷಕ್ಕೆ ಒಂದು ಭಾಗ. ಸಂಘಟನೆಗೆ ಅದುವೇ ಸರ್ವಸ್ವವಲ್ಲ. ಪಕ್ಷದ ವಿಚಾರ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ ಬಿಜೆಪಿ.ಮತದಾರರನ್ನಾಗಿ ಜನತೆಯನ್ನು ಪರಿವರ್ತಿಸುವ ಜವಾಬ್ದಾರಿ ಜನಪ್ರತಿನಿಧಿಗಳಿಗಿಂತ ಕಾರ್ಯಕರ್ತರಿಗೆ ಜಾಸ್ತಿಯಿದೆ. ಪಕ್ಷದ ಕೆಲಸ ಕಾರ್ಯಗಳನ್ನು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಚಾಚೂ ತಪ್ಪದೆ ಮಾಡಬೇಕು. ಚುನಾವಣೆಯಲ್ಲಿ ಸೋಲಬಹುದು. ಆದರೆ ಸಂಘಟನೆಯಲ್ಲಿ ಸೋಲಬಾರದು ಎನ್ನುವುದಾದರೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬೂತ್, ಮಂಡಲ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳಲ್ಲಿ ನಮ್ಮ ಸರ್ಕಾರದ ಯೋಜನೆಗಳನ್ನು ಎಲ್ಲರಿಗೂ ತಿಳಿಸಬೇಕು. ಪಕ್ಷದ ಕೆಲಸ ಕಾರ್ಯ ಚಟುವಟಿಕೆಗಳಲ್ಲಿ ಯಾವುದೇ ರಾಜಿಯಿಲ್ಲ. ನಿಮಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರ ಪಕ್ಷ ಯಾವುದೇ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಮತಾಂತರ, ಗೋಹತ್ಯೆ ನಿಲ್ಲಬೇಕು. ನಮ್ಮ ನಾಯಕರುಗಳು ನೀಡಿದ ಯಾವ ಭರವಸೆಗಳು ಸುಳ್ಳಾಗಿಲ್ಲ. ಸಂದರ್ಭ ಬಂದಾಗ ಒಂದೊಂದೆ ಮಾಡಿ ತೋರಿಸುತ್ತಾರೆ. ಮೇಲ್ಮನೆ, ಕೆಳಮನೆಯಲ್ಲಿ ಬಿಜೆಪಿ.ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು. ಕಾಂಗ್ರೆಸ್ ಮತಗಳನ್ನು ಎಳೆದುಕೊಳ್ಳುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯಮಗ್ನರಾಗಬೇಕೆಂದು ತಾಕೀತು ಮಾಡಿದರು.
ಬಿಜೆಪಿ.ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಮಾತನಾಡಿ ರಾಜ್ಯದ ಎಲ್ಲಾ ಕಡೆ ನಮ್ಮ ಪಕ್ಷಕ್ಕೆ ಈ ಚುನಾವಣೆಯಲ್ಲಿ ಒಳ್ಳೆಯ ವಾತಾವರಣವಿದೆ. 25 ಸ್ಥಾನಗಳಲ್ಲಿ 20 ಕಡೆ ಸ್ಪರ್ಧಿಸಿದ್ದು, ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯದ ನಾಯಕರುಗಳು ವಿಧಾನಪರಿಷತ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದರಿಂದ ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ.ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್ ಮಾತನಾಡಿ ಬಿಜೆಪಿ.ಗೆ ಅಧಿಕಾರಕ್ಕಿಂತ ದೇಶ ಮೊದಲು. ಅಧಿಕಾರಕ್ಕಾಗಿ ಹುಟ್ಟಿಕೊಂಡಿದ್ದಲ್ಲ. ಹಿರಿಯ ನಾಯಕರುಗಳ ತ್ಯಾಗ ಬಲಿದಾನಗಳನ್ನು ಮುಂದಿಟ್ಟುಕೊಂಡು ಸಂಘಟಿತರಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಗೆಲುವು ತಂದುಕೊಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಸಂಪತ್‍ಕುಮಾರ್ ಮಾತನಾಡಿದರು. ಯುವ ಮುಖಂಡರುಗಳಾದ ಜಿ.ಎಸ್.ಅನಿತ್‍ಕುಮಾರ್, ಡಾ.ಸಿದ್ದಾರ್ಥ ಗುಂಡಾರ್ಪಿ, ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ಕಾರ್ಯದರ್ಶಿ ರೇಖ ವೇದಿಕೆಯಲ್ಲಿದ್ದರು.