ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ.
ಬಿಜೆಪಿಯ 15 ವರ್ಷಗಳ ಜೈತ್ರಯಾತ್ರೆಗೆ ಎಎಪಿ ಬ್ರೇಕ್ ಹಾಕಿದೆ. ಎಕ್ಸಿಟ್ ಪೋಲ್‌ಗಳ ನಿರೀಕ್ಷೆಗೆ ತಕ್ಕಂತೆ ವಿಜಯದುಂದುಬಿ ಮೊಳಗಿತು. ಒಟ್ಟು 250 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ 126 ಸ್ಥಾನಗಳು ಬೇಕಿದ್ದು ಅದರಲ್ಲಿ ಎಎಪಿಗೆ 134 ಸ್ಥಾನಗಳು ಲಭಿಸಿವೆ. ಇನ್ನೊಂದೆಡೆ, ಬಿಜೆಪಿ 103 ಸೀಟು ಗೆದ್ದರೆ, ಕಾಂಗ್ರೆಸ್ ಕೇವಲ 10 ಸ್ಥಾನಗಳಿಗೆ ಸೀಮಿತವಾಗಿದೆ. ಇತರರು 3 ಸ್ಥಾನಗಳನ್ನು ಗೆದ್ದಿದ್ದಾರೆ.
ದೆಹಲಿ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಸಂತಸ ವ್ಯಕ್ತಪಡಿಸಿದ್ದಾರೆ. ‘ದಿಲ್ಲಿಯಲ್ಲಿ 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೇಜ್ರಿವಾಲ್ ಕಿತ್ತೆಸೆದಿದ್ದಾರೆ. ಇದೀಗ ಎಂಸಿಡಿಯಲ್ಲಿ ಬಿಜೆಪಿ 15 ವರ್ಷಗಳ ಆಡಳಿತಕ್ಕೆ ತೆರೆಬಿದ್ದಿದೆ. ದೆಹಲಿಯ ಜನರು ದ್ವೇಷದ ರಾಜಕಾರಣಕ್ಕೆ ಮನ್ನಣೆ ನೀಡುವುದಿಲ್ಲ ಎಂದು ಸಾಬೀತಾಗಿದೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ನ ಎಲ್ಲಾ 250 ವಾರ್ಡ್‌ಗಳಿಗೆ ಡಿಸೆಂಬರ್ 4 ರಂದು ಮತದಾನ ನಡೆದಿತ್ತು. 1349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1958 ರಲ್ಲಿ ಸ್ಥಾಪನೆಯಾದ ಎಂಸಿಡಿಯನ್ನು 2012 ರಲ್ಲಿ ಅಂದಿನ ಸಿಎಂ ಶೀಲಾ ದೀಕ್ಷಿತ್ ಅವರು ಮೂರು ನಿಗಮಗಳಾಗಿ ವಿಂಗಡಿಸಿದರು. ನಂತರ ಮತ್ತೆ 2022 ರಲ್ಲಿ ಅವುಗಳನ್ನು ವಿಲೀನಗೊಳಿಸಲಾಯಿತು ಮತ್ತು MCD ಎಂದು ಪುನರುಜ್ಜೀವನಗೊಳಿಸಲಾಯಿತು. ಇದು ಮೇ 22 ರಿಂದ ಜಾರಿಗೆ ಬಂದಿತ್ತು. 2017 ರ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ 181 ಸ್ಥಾನಗಳನ್ನು, ಎಎಪಿ 48 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 27 ಸ್ಥಾನಗಳನ್ನು ಗೆದ್ದಿತ್ತು.