ನೀರು ಸರಬರಾಜು ವಿಳಂಬ; ನಗರಸಭೆ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಸಮಾಧಾನ

2 Min Read

 

 

ಕರ್ನಾಟಕ ವಾರ್ತೆ. ಮಾ.16: ಚಿತ್ರದುರ್ಗ ನಗರದಲ್ಲಿ 15 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದಕ್ಕೆ ನಗರಸಭೆ ಅಧಿಕಾರಿಗಳ ಬಗ್ಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಗರಸಭೆ ಮತ್ತು ಬೆಸ್ಕಾಂ ಅಧಿಕಾರಿಗಳ ಜಂಟಿ ಸಭೆ ನಡೆಸಿ ಅವರು ಮಾತನಾಡಿದರು.

 

ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಮೂಲಗಳಲ್ಲಿ ಯಾವುದೇ ತೊಂದರೆಯಿಲ್ಲ. ಸಾಕಷ್ಟು ನೀರಿನ ಪ್ರಮಾಣವೂ ಲಭ್ಯವಿದೆ. ನೀರಿನ ಸಮಸ್ಯೆಗೆ ತಾಂತ್ರಿಕ ಕಾರಣಗಳಿಗಿಂತ ಅಧಿಕಾರಿಗಳ ಬೇಜವಾಬ್ದಾರಿಯೇ ಮುಖ್ಯ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಿಡಿಕಾರಿದರು.

 

ನಗರಸಭೆ ಅಧಿಕಾರಿಗಳು ಪದೇ ಪದೇ ವಿದ್ಯುತ್ ವ್ಯತ್ಯಯದಿಂದಾಗಿ ವಿ.ವಿ.ಸಾಗರದಿಂದ ನೀರು ಎತ್ತಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ನೆಪ ಹೇಳುತ್ತಿದ್ದಾರೆ. ಆದರೆ ತಿಂಗಳಿನಲ್ಲಿ ಕೆಲ ದಿನಗಳು ಮಾತ್ರ ದಿನಕ್ಕೆ ಅರ್ಧ ಗಂಟೆ ಅಥವಾ ಒಂದು ಗಂಟೆಯಷ್ಟೇ ವಿದ್ಯುತ್ ವ್ಯತ್ಯಯವಾಗಿದೆ. ಇದು ನಗರದಲ್ಲಿ 15 ದಿನಗಳ ಕಾಲ ನೀರು ಸಬರಾಜು ಮಾಡದೇ ಇರಲು ಕಾರಣವಾಗಲು ಸಾಧ್ಯವಿಲ್ಲ. ನಗರ ಸಭೆಯಲ್ಲಿ ಅಧಿಕಾರಿಗಳು ಯಾರು ಹಣ ನೀಡುತ್ತಾರೋ ಅವರಿಗೆ ಮಾತ್ರ ಸರಿಯಾಗಿ ನೀರು ಬಿಡುತ್ತಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇಂತಹ ತಾರತಮ್ಯ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.

ಅಕ್ರಮ ಕನೆಕ್ಷನ್ ಮತ್ತು ಮೋಟಾರ್ ಬಳಕೆ: ರೈಸಿಂಗ್ ಮೇನ್ ಪೈಪ್‍ಲೈನ್‍ಗಳಿಗೆ ಅಕ್ರಮವಾಗಿ ಕನೆಕ್ಷನ್ ಪಡೆದಿರುವುದು ಮತ್ತು ರೈತರು ನೇರವಾಗಿ ಮೋಟಾರ್ ಹಚ್ಚಿ ನೀರು ಪಡೆಯುತ್ತಿರುವುದು ನಗರಕ್ಕೆ ನೀರು ತಲುಪಲು ಅಡ್ಡಿಯಾಗುತ್ತಿದೆ ಎಂಬ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು. ಅಕ್ರಮ ಕನೆಕ್ಷನ್ ಕಡಿತಗೊಳಿಸಲು ಪೆÇಲೀಸ್ ಬಂದೋಬಸ್ತ್‍ನೊಂದಿಗೆ ತಹಶೀಲ್ದಾರ್ ಹಾಗೂ ನಗರಸಭೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಬೇಕು. ರಾತ್ರಿ ವೇಳೆ ಕಳ್ಳತನದಿಂದ ನೀರು ಪಡೆಯುವವರ ಮೇಲೆ ನಿಗಾ ಇಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

 

ಅಧಿಕಾರಿಗಳಿಗೆ ಎಚ್ಚರಿಕೆ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಅದನ್ನು ಸರಿಪಡಿಸಲು ನಿರಂತರವಾಗಿ ಕೆಲಸ ಮಾಡಬೇಕು. ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾದರೆ, ಇನ್ನು ಮುಂದೆ ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಪುನಃಸ್ಥಾಪಿಸಿ ನೀರು ಸರಬರಾಜು ಮಾಡಬೇಕು. ದಿನನಿತ್ಯ ನೂರಾರು ಜನ ಸಾರ್ವಜನಿಕರು ಕಚೇರಿಗೆ ಬಂದು ಕುಡಿಯುವ ನೀರಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.  ಸಾರ್ವಜನಿಕರಿಗೆ ಸಮಪರ್ಕವಾಗಿ ಉತ್ತರಿಸಲಾಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯನ್ನು ಸಹಿಸುವುದಿಲ್ಲ. ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 

ಸಭೆಯಲ್ಲಿ ಬಿ.ಟಿ ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮ ಹಾನಗಲ್, ನಗರಸಭೆ ಆಯುಕ್ತ ಲಕ್ಷ್ಮೀ, ಕುಡಿಯುವ ನೀರು ಪೂರೈಕೆ ಸಂಬಂಧಿಸಿದ ಎಇಇ ರಾಜು ಸೇರಿದಂತೆ ಮತ್ತಿತರರು ಇದ್ದರು.

Share This Article