ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.30 : ಜಿಲ್ಲೆಯಾದ್ಯಂತ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆ ವಿಳಂಭವಾಗುತ್ತಿರುವುದನ್ನು ಖಂಡಿಸಿ ನಗರಸಭೆ ಸದಸ್ಯರುಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರು, ರಾಜ್ಯದ ಮುಖ್ಯಮಂತ್ರಿ, ಪೌರಾಡಳಿತ ಸಚಿವರಿಗೆ ಮನವಿ ಅರ್ಪಿಸಿದರು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು. ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಸೆಕ್ಷನ್ 18 ರಲ್ಲಿ ಕೌನ್ಸಿಲರ್‍ಗಳ ಪದಾವಧಿಯು ಮುನ್ಸಿಪಲ್ ಕೌನ್ಸಿಲರನ್ನು ಮೊದಲ ಸಭೆ ನಡೆಸಿದ ದಿನಾಂಕದಿಂದ ಆರಂಭವಾಗತಕ್ಕದ್ದೆಂಬ ನಿಯಮವಿರುತ್ತದೆ.
ಪ್ರತಿ ಬಾರಿಯೂ ರಾಜ್ಯ ಸರ್ಕಾರದ ನಿರ್ಲಕ್ಷೆಯಿಂದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗಧಿ ಅನಗತ್ಯ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಮೀಸಲಾತಿಯನ್ನು ಬೇಗನೆ ಪ್ರಕಟಿಸಿ ಚುನಾಯಿತ ಪ್ರತಿನಿಧಿಗಳಿಗೆ ನ್ಯಾಯ ಒದಗಿಸಬೇಕೆಂದು ಸದಸ್ಯರುಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥ್‍ಗೊಪ್ಪೆ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಸುರೇಶ್, ಮಾಜಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರುಗಳಾದ ಭಾಸ್ಕರ್, ನಸ್ರುಲ್ಲಾ, ಅನಿತರಮೇಶ್, ತಾರಕೇಶ್ವರಿ, ಭಾಗ್ಯಮ್ಮ, ಅನುರಾಧ ರವಿಶಂಕರ್, ಮಾಜಿ ಸದಸ್ಯ ಟಿ.ರಮೇಶ್, ಹೊಸದುರ್ಗದ ಶ್ರೀನಿವಾಸ್, ದೊಡ್ಡಯ್ಯ, ಹೊಳಲ್ಕೆರೆಯ ಕೆ.ಸಿ.ರಮೇಶ್, ಅಶೋಕ್, ಮುರುಗೇಶ್, ಹಿರಿಯೂರಿನ ಅಜ್ಜಪ್ಪ, ಶಿವರಂಜಿನಿ, ಚಳ್ಳಕೆರೆಯ ರಮೇಶ್‍ಗೌಡ, ಮೊಳಕಾಲ್ಮುರುವಿನ ಲಕ್ಷ್ಮಣ್ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.