ಒಳಮೀಸಲಾತಿ ಜಾರಿಯಲ್ಲಿ ವಿಳಂಬ: ಮಾರ್ಚ್ 10 ರಂದು ಸರ್ಕಾರದ ವಿರುದ್ಧ ಪ್ರತಿಭಟನೆ

1 Min Read

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.05 : ರಾಜ್ಯ ಸರ್ಕಾರ ಒಳ ಮೀಸಲಾತಿಯಂತೆ 56,432 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಮಾ.10 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗವುದೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೆಹಳ್ಳಿ ಮಲ್ಲಿಕಾರ್ಜುನ ತಿಳಿಸಿದರು.

 

ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ತಿಂಗಳಲ್ಲಿ ನೇಮಕಾತಿ ಮಾಡುವಂತೆ ಸರ್ಕಾರ ಆದೇಶಿಸಿದೆ. ಇಲ್ಲಿಯವರೆಗೂ ಅಧಿಕಾರ ನಡೆಸಿದ ಎಲ್ಲಾ ರಾಜಕಾರಣಿಗಳು ಒಳ ಮೀಸಲಾತಿ ಜಾರಿಗೊಳಿಸದೆ ಮಾದಿಗರಿಗೆ ವಂಚಿಸುತ್ತಲೆ ಬರುತ್ತಿದ್ದಾರೆ. ಕಳೆದ 35 ವರ್ಷಗಳಿಂದಲೂ ಒಳ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಅಧಿಕಾರದಲ್ಲಿದ್ದಾಗ ಒಳ ಮೀಸಲಾತಿಯನ್ನು ಜಾರಿ ಮಾಡದ ನಮ್ಮ ಜನಾಂಗದವರೆ ಅಧಿಕಾರದಿಂದ ಕೆಳಗಿಳಿದ ಕೂಡಲೆ ಒಳ ಮೀಸಲಾತಿ ಬಗ್ಗೆ ಕೂಗು ಹಾಕುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು?

ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಉಡಾಫೆ ಉತ್ತರ ಕೊಡುತ್ತಿದ್ದಾರೆ. ಮಾದಿಗರ ಸಮಸ್ಯೆಗಳೆಂದರೆ ಅವರಿಗೆ ಕಾಲ ಕಸವಾಗಿದೆ. ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷ ಏಳು ತಿಂಗಳುಗಳಾಗಿದೆ. ರಾಜ್ಯ ಸರ್ಕಾರ ಇನ್ನು ಮೀನಾಮೇಷ ಎಣಿಸುತ್ತಿದೆ. ಜಸ್ಟಿಸ್ ನಾಗಮೋಹನ್‍ದಾಸ್ ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ ಒಳ ಮೀಸಲಾತಿ ಜಾರಿಗೆ ತರಲು ಮನಸ್ಸಿಲ್ಲ. ಛಲವಾದಿಗಳು ಒಳ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ. ಒಳ ಮೀಸಲಾತಿಯನ್ನು ಯಾರು ವಿರೋಧಿಸುತ್ತಾರೋ ಅವರುಗಳೆಲ್ಲಾ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿಗಳು ಎಂದರು.

 

ಪ್ರೊ.ಸಿ.ಕೆ.ಮಹೇಶ್ ಮಾತನಾಡಿ ಮಾದಿಗ ರಾಜಕಾರಣಿಗಳು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಒಳ ಮೀಸಲಾತಿಯನ್ನು ಅನುಷ್ಟಾನಕ್ಕೆ ತರಬಾರದೆಂಬುದು ರಾಜಕಾರಣಿಗಳ ಉದ್ದೇಶ. ಸಚಿವ ಹೆಚ್.ಸಿ.ಮಹದೇವಪ್ಪನವರ ಬಾಯಲ್ಲಿ ಅಂಬೇಡ್ಕರ್ ಇದ್ದಾರೆ. ಒಳಗೆಲ್ಲಾ ಬ್ರಾಹ್ಮಣ್ಯವಿದೆ. ಜ್ಞಾನಪ್ರಕಾಶ್‍ಸ್ವಾಮೀಜಿ ಅಂಬೇಡ್ಕರ್, ಬುದ್ದನಿಗೆ ಅವಮಾನ ಮಾಡುತ್ತಿರುವುದನ್ನು ಖಂಡಿಸುತ್ತೇನೆಂದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಡಿ.ದುರುಗೇಶ್, ಚಿಕ್ಕಣ್ಣ, ಕೆ.ಕುಮಾರ್, ಸುಧಾಕರ್, ರಾಮುಗೋಸಾಯಿ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Enable Notifications OK No thanks