ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.01 : ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅನಗತ್ಯವಾಗಿ ವಿಳಂಭ ಮಾಡುತ್ತಿರುವುದನ್ನು ವಿರೋಧಿಸಿ ಮಾ. 5 ರಂದು ಬಿ.ಕೃಷ್ಣಪ್ಪ ಸಮಾಧಿಯಿಂದ ಪಾದಯಾತ್ರೆ ಹೊರಟು 22 ರಂದು ಬೆಂಗಳೂರು ತಲುಪಲಿದೆ ಎಂದು ಒಳ ಮೀಸಲಾತಿ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ತಿಳಿಸಿದರು.

ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಪ್ರಿಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ಇಷ್ಟೊತ್ತಿಗಾಗಲೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕಿತ್ತು. ದಲಿತರನ್ನು ಯಾಮಾರಿಸುವ ನಯವಂಚಕತನ ಪ್ರದರ್ಶಿಸುತ್ತಿದೆ. ಪಾದಯಾತ್ರೆಯಲ್ಲಿ ಅರೆಬೆತ್ತಲೆ, ಉರುಳುಸೇವೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನ ಅಣಕು ಶವಯಾತ್ರೆಯಿರುತ್ತದೆ. ಕಾರ್ಯಕರ್ತರು ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಅಂತಿಮ ಎಚ್ಚರಿಕೆ ನೀಡಲಿದ್ದಾರೆಂದರು.
ನಮ್ಮ ನೋವು ಅರ್ಥಮಾಡಿಕೊಂಡು ಶೀಘ್ರವೇ ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಪಾದಯಾತ್ರೆ ಆರಂಭಿಸಿದ್ದು, ದಿನಕ್ಕೆ ಐದಿನೈದರಿಂದ ಇಪ್ಪತ್ತು ಕಿ.ಮೀ. ನಡೆದು ಯಾತ್ರೆ ಬೆಂಗಳೂರು ತಲುಪಲಿದೆ. ಮಾದಿಗ ಸಮುದಾಯದ ಸಚಿವರುಗಳ ಅಣಕು ಬೊಂಬೆಗಳನ್ನು ಮಾಡಿ ರಕ್ತದ ಅಭಿಷೇಕ ಮಾಡುತ್ತೇವೆ. ಒಟ್ಟಾರೆ ಈ ಪಾದಯಾತ್ರೆ ಉಗ್ರವಾಗಿರುತ್ತದೆ. ಜಸ್ಟಿಸ್ ನಾಗಮೋಹನ್‍ದಾಸ್ ಸರ್ಕಾರಕ್ಕೆ ನೀಡಿರುವ ಗಡುವು ಮುಗಿದಿರುವುದರಿಂದ ಯಾವುದೇ ಕಾರಣಕ್ಕೂ ತಡ ಮಾಡದೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂಬುದು ನಮ್ಮ ಉದ್ದೇಶ. ಒಳ ಮೀಸಲಾತಿ ಬಗ್ಗೆ ಚಿಂತಿಸುವ ಎಲ್ಲಾ ಸಂಘಟನೆಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದೆಂದು ಬಿ.ಆರ್.ಭಾಸ್ಕರ್‍ಪ್ರಸಾದ್ ಮನವಿ ಮಾಡಿದರು.
ಬಾಳೆಕಾಯಿ ಶ್ರೀನಿವಾಸ್, ಹನುಮಂತಪ್ಪದುರ್ಗ, ಮೋಹನ್‍ರೆಡ್ಡಿ, ಹುಲ್ಲೂರು ಕುಮಾರ್, ಅವಿನಾಶ್, ಮಲ್ಲಿಕಾರ್ಜುನ್, ರಾಜಣ್ಣ, ಕಾಂತರಾಜ್, ಶಿವಣ್ಣ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

