ಸುದ್ದಿಒನ್, ಚಿತ್ರದುರ್ಗ, ಜೂ. 18 : ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕಿನ ವೇಗ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಂದಿನಂತೆ ಉದಾಸೀನ ಮನೋಭಾವ ತಾಳಿವೆ. ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.
ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಲೋಕಸಭೆ ಚುನಾವಣೆ ಎದುರಾದ ಹಿನ್ನಲೆಯಲ್ಲಿ ಸಹಜವಾಗಿ ಹೋರಾಟದಿಂದ ಹಿಂದೆ ಸರಿದಿದ್ದೆವು. ಚುನಾವಣೆ ಮುಗಿದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಅನುದಾನ ಬಿಡುಗಡೆಗೂ ಮುಂದಾಗಿಲ್ಲ. ಇದೇ ನಿರ್ಲಕ್ಷ್ಯ ಮುಂದುವರಿದರೆ ಯೋಜನೆ ಮುಗಿಯಲ್ಲಿ ಮತ್ತೊಂದು ದಶಕ ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕೊಟ್ಟ ಮಾತಿನಂದ 5300 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿಯೇ ಕಾಲ ಕಳೆಯುತ್ತಿದೆ. ನಾವುಗಳು ಗ್ಯಾರಂಟಿ ಯೋಜನೆ ವಿರೋದಿಸುವುದಿಲ್ಲ, ಆದರೆ ನೀರಾವರಿ ಯೋಜನೆಗಳ ಕಾಲಮಿತಿಯಲ್ಲಿ ಮುಗಿಸುವುದು ಸರ್ಕಾರಗಳ ಕರ್ತವ್ಯವೆಂಬುದ ನೆನಪು ಮಾಡಿಕೊಡುತ್ತಿದ್ದೇವೆ ಎಂದು ಲಿಂಗಾರೆಡ್ಡಿ ಹೇಳಿದರು.
ಅಬ್ಬಿನಹೊಳಲು ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆ ಮುಗಿದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಕಾಲುವೆ ನಿರ್ಮಾಣದ ಕಾಮಗಾರಿ ಮುಗಿದಿದೆಯಾ ಎಂಬ ಬಗ್ಗೆ ಇದುವರೆಗೂ ಇಲಾಖೆಯಿಂದ ಸಮಜಾಯಿಷಿ ನೀಡಲಾಗಿಲ್ಲ. ಅಧಿಕಾರಿಗಳು ಕೂಡಾ ಭೂ ಸ್ವಾಧೀನದ ಬಗ್ಗೆ ವಾಸ್ತವಾಂಶಗಳ ಬಹಿರಂಗಗೊಳಿಸಿಲ್ಲ. ಭೂ ಸ್ವಾಧೀನವನ್ನೇ ದೊಡ್ಡ ಸಮಸ್ಯೆನ್ನಾಗಿ ಮಾಡಿ ಯೋಜನೆಯ ಮೂಲೆ ಗುಂಪಾಗಿ ಮಾಡುವ ಹುನ್ನಾರಗಳು ನಡೆಯುತ್ತಿವೆಯೇ ಎಂಬ ಬಗ್ಗೆ ಅನುಮಾಗಳು ಮೂಡಿವೆ ಎಂದರು.
ನೂತನವಾಗ ಸಂಸದರಾಗಿರುವ ಗೋವಿಂದ ಕಾರಜೋಳ ಅವರು ಈ ಮೊದಲು ಜಲಸಂಪನ್ಮೂಲ ಸಚಿವರಾಗಿದ್ದರು. ಅವರಿಗೆ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಅರಿವಿದೆ. ಕೇಂದ್ರದಿಂದ 5300 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಬೇಕಿದೆ. ಹಾಗಾಗಿ ಬುಧವಾರ ನೀರಾವರಿ ಅನುಷ್ಠಾನ ಸಮಿತಿಯಿಂದ ಗೋವಿಂದ ಕಾರಜೋಳ ಅವರ ಜೊತೆ ಚರ್ಚಿಸಲಾಗುವುದು.
ಕೇಂದ್ರದಲ್ಲಿ ನೂತನ ಸಚಿವರಾಗಿ ಮಧ್ಯ ಕರ್ನಾಟಕ ಪ್ರತಿನಿಧಿಸುತ್ತಿರುವ ವಿ. ಸೋಮಣ್ಣ ಅವರನ್ನು ಹೋರಾಟ ಸಮಿತಿ ಸಂಪರ್ಕಿಸಲು ಮುಂದಾಗಿದೆ. ಜೂನ್ 24 ರಿಂದ ಲೋಕಸಭೆ ಅಧಿವೇಶನ ಆರಂಭವಾಗಲಿದೆ . ಅಷ್ಟರೊಳಗೆ ಸಚಿವರ ಭೇಟಿಯಾಗಿ ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆಗೆ ಯತ್ನಿಸುವಂತೆ ಕೋರಲಾಗುವುದು. ಇದೇ ಪ್ರಸ್ತಾಪ ಸಂಸದ ಗೋವಿಂದ ಕಾರಜೋಳ ಅವರ ಮುಂದೆ ಮಂಡಿಸಲಾಗುವುದೆಂದರು.
ಭದ್ರಾ ಮೇಲ್ದಂಡೆಗೆ ಆಗ್ರಹಿಸಿ ಇದುವರೆಗೆ ನಾಲ್ಕು ತಾಲೂಕುಗಳ ಬಂದ್ ಮಾಡಲಾಗಿದೆ . ಶೀಘ್ರ ಮೊಳಕಾಲ್ಮುರು ಹಾಗೂ ಹೊಸದುರ್ಗ ಬಂದ್ ಗೆ ಕರೆ ನೀಡಲಾಗುವುದು. ರಾಜ್ಯ ಸರ್ಕಾರ ಬಯಲು ಸೀಮೆ ಜನರ ತಾಳ್ಮೆ ಪರೀಕ್ಷಿಸದೆ ಭದ್ರಾ ಮೇಲ್ದಂಡೆಗೆ ಚುರುಕಿನ ವೇಗ ನೀಡಬೇಕೆಂದು ಲಿಂಗಾರೆಡ್ಡಿ ಆಗ್ರಹಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮಹಿಳಾ ಘಟಕದ ಅಧ್ಯಕ್ಷೆ ದೊಡ್ಡ ಸಿದ್ದವ್ವನಹಳ್ಳಿ ಸುಧ, ನೀರಾವರಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟ ಕಾಂತರಾಜ್ ಇದ್ದರು.