ನಟ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ನಿರ್ಮಾಪಕ ಎನ್. ಕುಮಾರ್ ನಡುವಿನ ವಿವಾದ ಮತ್ತೆ ಬೆಳಕಿಗೆ ಬಂದಿದೆ. 2023ರಲ್ಲಿ ಆರಂಭವಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
2023ರಲ್ಲಿ ಸಿನಿಮಾ ಕಾಲ್‌ಶೀಟ್ ನೀಡುವುದಾಗಿ ಹೇಳಿ ಸುದೀಪ್ ₹9 ಕೋಟಿ ಪಡೆದಿದ್ದಾರೆ ಎಂದು ನಿರ್ಮಾಪಕರು ಎಂ.ಎನ್. ಸುರೇಶ್ ಮತ್ತು ಎನ್. ಕುಮಾರ್ ಆರೋಪಿಸಿದ್ದರು. ಈ ಆರೋಪಗಳನ್ನು ತಳ್ಳಿ ಹಾಕಿದ ಸುದೀಪ್, ಅವು ನಿರಾಧಾರವಾಗಿವೆ ಎಂದು ಹೇಳಿ, ಇಬ್ಬರಿಗೂ ಲೀಗಲ್ ನೋಟಿಸ್ ಕಳುಹಿಸಿದ್ದರು. ಜೊತೆಗೆ 10 ದಿನಗಳೊಳಗೆ ಬಹಿರಂಗ ಕ್ಷಮೆಯಾಚನೆ ಸಲ್ಲಿಸಿ ₹10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದರು.
ಆದರೆ, ನೋಟಿಸ್‌ಗೆ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಸುದೀಪ್ ಕ್ರಿಮಿನಲ್ ಹಾಗೂ ಮಾನನಷ್ಟ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಕ್ರಾಸ್ ಎಕ್ಸಾಮಿನೇಷನ್ ಹಿನ್ನೆಲೆಯಲ್ಲಿ ಸುದೀಪ್ ನಿನ್ನೆ ಕೋರ್ಟ್‌ಗೆ ಹಾಜರಾದರು.
ಮಧ್ಯಾಹ್ನ ಸುಮಾರು 3 ಗಂಟೆಗೆ 7ನೇ ಎಸಿಜೆಎಂ ನ್ಯಾಯಾಲಯದಲ್ಲಿ ಹಾಜರಾದ ಸುದೀಪ್ ಅವರನ್ನು ನಿರ್ಮಾಪಕರ ಪರ ವಕೀಲರು ಪ್ರಶ್ನಿಸಿದರು. ನಂತರ, ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜೂನ್ 6ಕ್ಕೆ ಮುಂದೂಡಿದೆ.















