ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 13 : ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಹಾಲಿ ಸದಸ್ಯ ಕೆ.ಅನ್ವರ್‍ಬಾಷರವರ ಮೇಲೆ ಕೆಲವರು ವಿನಾ ಕಾರಣ ಅಕ್ರಮದ ಆಪಾದನೆ ಹೊರಿಸಿ ವಿವಿಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ತೊಂದರೆ ಕೊಡುತ್ತಿರುವುದನ್ನು ವಿರೋಧಿಸಿ ಮುಸ್ಲಿಂ ಸಮಾಜದ ಕೆಲವು ಮುಖಂಡರುಗಳು ಹಾಗೂ ಮಸೀದಿಯ ಮುತುವಲ್ಲಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೆ.ಅನ್ವರ್‍ಬಾಷರವರು ವಕ್ಫ್ ಮಂಡಳಿ ಜಾಗವನ್ನು ಕಬಳಿಸಿದ್ದಾರೆಂದು ಕೆಲವು ಪಟ್ಟಭದ್ರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗೆ ದೂರು ನೀಡಿ ಸಮಾಜದಲ್ಲಿರುವ ಅವರ ಗೌರವಕ್ಕೆ ಧಕ್ಕೆ ತರುತ್ತಿವುದನ್ನು ನೋಡಿದರೆ ಇದರ ಹಿಂದೆ ರಾಜಕೀಯ ಪಿತೂರಿಯಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆ.ಅನ್ವರ್‍ಬಾಷರವರು ವಕ್ಫ್ ಮಂಡಳಿ ಚೇರ್ಮನ್ ಆಗಿದ್ದಾಗ ಸರ್ಕಾರದ ವತಿಯಿಂದ ಪಿ.ಯು.ಕಾಲೇಜು ಮಂಜೂರಾತಿ ಮಾಡಿಸಿ ಶೈಕ್ಷಣಿಕವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶಾದಿ ಮಹಲ್ ನಿರ್ಮಾಣ ಹಂತದಲ್ಲಿದೆ. ಸುಸಜ್ಜಿತ ವೆಂಟಿಲೇಟರ್ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಚಿತ ಅಂಬ್ಯುಲೆನ್ಸ್‍ಗಳ ಸೌಲಭ್ಯ ಒದಗಿಸಿದ್ದಾರೆ. ಮತ್ತೊಮ್ಮೆ ಇವರು ವಕ್ಫ್ ಮಂಡಳಿ ಚೇರ್ಮನ್ ಆಗುವುದನ್ನು ತಡೆಯುವುದಕ್ಕಾಗಿ ಇಂತಹ ಕೃತ್ಯಗಳನ್ನು ಎಸಗುತ್ತಿರುವವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಹಾಜಿ ನಯಾಜ್, ಇಲಾಹಿ ಮುನ್ನ, ಸೈಫುಲ್ಲಾ, ಹನೀಸ್, ಸೈಯದ್ ಖುದ್ದೂಸ್, ಹಾಜಿ ಆರ್.ದಾದಾಪೀರ್, ಸೈಯದ್ ಇಸ್ಮಾಯಿಲ್, ವರದ ಹಜರತ್, ನೂರುಲ್ಲಾ, ಹೆಚ್.ಪ್ಯಾರೆಜಾನ್, ಹಾಜಿ ಗೌಸ್‍ಪೀರ್, ಮುಹಿಬ್, ಬಾಷ, ನಜೀರ್, ಹುಸೇನ್‍ಪೀರ್, ಕೆ.ನಜೀರ್ ಅಹಮದ್ ಸೇರಿದಂತೆ ಜಿಲ್ಲೆಯ ಮಸೀದಿಯ ಮುತುವಲ್ಲಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

