ಸುದ್ದಿಒನ್, ದೀಪಾವಳಿ ಹಬ್ಬದ ವಿಶೇಷೇ ಲೇಖನ ಲೇಖಕರು : ಜಿ. ಎಸ್. ಕೆಂಚಪ್ಪ. ಆಧ್ಯಾತ್ಮಿಕ ಚಿಂತಕರು, ಶ್ರೀ ಕೆಂಚಾವಧೂತರ ಮಠ, ಕೊಳಾಳು, ಹೊಳಲ್ಕೆರೆ ತಾ||ಚಿತ್ರದುರ್ಗ. ಪ್ರಾಂಶುಪಾಲರು, ವಾಣಿವಿಲಾಸ ಪುರ, ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲಾ. ಮೊ : 9901417553
•••••••••••••••••••••••••••••••••••••••••••••••••••••••••••••••••
“ವಸುದೈವ ಕುಟುಂಬಕಂ” ಎಂಬದು ಆರ್ಯವಾಣಿ. ಇದು ನಮ್ಮ ಜನರ ಜೀವನದ ಧ್ಯೇಯವಾಕ್ಯ. ಪ್ರಪಂಚವು ನಾಶವಾಗದೆ ಇರಬೇಕಾದರೆ, ಒಂದೇ ಕುಟುಂಬದಂತೆ ಬಾಳಬೇಕಾದರೆ ವೇದವು ಸಾರಿದ ಈ ಉದಾತ್ತ ಚಿಂತನೆಯ ಅನುಷ್ಠಾನ, ಪಾಲನೆ ಅಗತ್ಯ.
ಅದಕ್ಕಾಗಿ ಹಿಂದೂ ಜನರ ಜೀವನ ಪದ್ಧತಿಯನ್ನು ಅನುಸರಿಸುವದೊಂದೇ ಸೂಕ್ತ ಮಾರ್ಗ. ‘ಕಣ್ವಂತು ವಿಶ್ವಮಾರ್ಯಂ’ ಎಂಬಂತೆ ಪ್ರಪಂಚವನ್ನು ಆರ್ಯಭಾವದಿಂದ (ಶ್ರೇಷ್ಠ ಪರಂಪರೆ) ತುಂಬಲು ವೇದವು ಕರೆ ಕೊಟ್ಟಿದೆ.
ಅಂಥಹ ಶ್ರೇಷ್ಠ ಪರಿಸರದ ಸೃಷ್ಟಿಗಾಗಿ ಆಧ್ಯಾತ್ಮಿಕ ಆಚಾರ-ವಿಚಾರಗಳನ್ನು ಸಾಮಾನ್ಯ ಜನರ ನಡೆ-ನುಡಿಗಳಲ್ಲಿ ಸುಲಭವಾಗಿ ಆಧ್ಯಾತ್ಮಿಕತೆಯನ್ನು ಕರಗತಗೊಳಿಸಲು ಹಾಗೂ ಹಿರಿಯ ತಲೆಮಾರಿನಿಂದ ಕಿರಿಯ ತಲೆಮಾರಿನವರಿಗೆ ಪ್ರಾಚೀನ ಸಾಂಸ್ಕೃತಿಕ ಭಂಡಾರವನ್ನು (ಸಂಪನ್ಮೂಲ) ವರ್ಗಾವಣೆ ಮಾಡಲು, ಈ ಸಮಾಜವು ಬಳಸಿದ ಸಾಮಾಜಿಕ ಪ್ರಕ್ರಿಯೆಯೇ ಹಬ್ಬ ಹರಿದಿನಗಳ ಆಚರಣೆ. ಅದೊಂದು ನಿರಂತರ ಪ್ರಕ್ರಿಯೆ. ಜನ ಸಮೂಹವನ್ನು ಕೂಡಿಡುವ ವಿಧಾನ. ಎಲ್ಲ ಹಬ್ಬಗಳಿಗೆ ಇರುವಂತೆ ದೀಪಾವಳಿ ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ.
ದೀಪಾವಳಿ ಹಬ್ಬ ಬೆಳಕಿನ ಹಬ್ಬ. ಬೆಳಕಿದ್ದಲ್ಲಿ ಕತ್ತಲೆಗೆ ಅವಕಾಶವಿನ್ನೆಲ್ಲಿ? ಅಲ್ಲವೇ. ಬೆಳಕು ಎಂದರೆ ಜ್ಞಾನ. ಅಜ್ಞಾನವನ್ನು ನಾಶ ಮಾಡವ ಜ್ಯೋತಿ. ಹಿಂದುಗಳಲ್ಲಿ ಈ ಹಬ್ಬದಾಚರಣೆಗೆ ಒಂದು ಪೌರಾಣಿಕ ಹಿನ್ನೆಲೆ ಇದೆ.
ಅದೇನೆಂದರೆ, ವಿಷ್ಣು ಸರಸದಿಂದಿರುವಾಗ ಲಕ್ಷ್ಮೀಯು ಅವನ ವಾಹನ ಗರುಡನ ಮೇಲೆ ಪ್ರಯಾಣ ಮಾಡುತ್ತಾಳೆ. ಆದರೆ, ಏಕಾಂಗಿಯಾಗಿರುವಾಗ ಅವಳ ವಾಹನ ಗೂಬೆ. ಅದು ನಿಶಾಚರ. ಹಾಗಾಗಿ ಲಕ್ಷ್ಮಿ ಒಂಟಿಯಾಗಿ ಬರಬೇಕೆಂದರೆ ಕತ್ತಲಲ್ಲಿಯೇ ಬಂದು ಅದೇ ಕತ್ತಲಲ್ಲಿಯೇ ಹೊರಟು ಹೋಗುವಳೆಂಬ ನಂಬಿಕೆಯಿದೆ.
ಆದುದರಿಂದಲೇ ದೀಪಾವಳಿಯ ಕತ್ತಲೆಯಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ ಮನೆ ಮನೆಯ ಮುಂದೆ ಸಾಲುದೀಪಗಳನ್ನು ಬೆಳಗಿಸಿ ಆ ಮಹಾ ಲಕ್ಷ್ಮಿಯನ್ನು ಆಹ್ವಾನಿಸುತ್ತಾರೆ. ಏಕೆಂದರೆ ಮಾನವನು ಸಕಲ ಗುಣ ಹೀನನಾದರೂ ಸಹಿತ ಧನವಂತನಾದರೆ ಸಾಕು ಅವನ ಮನೆಯ ಬಾಗಿಲ ಮುಂದೆ ಗುಣ ಸಂಪನ್ನರು ಸಹಿತ ತೃಣದಂತೆ ಬಿದ್ದಿರುವರು ಎಂಬ ಲೋಕಾನುಭವವಿದೆಯಲ್ಲವೆ ? ಆದ್ದರಿಂದ ಹಣ, ಐಶ್ವರ್ಯ, ಸಂಪತ್ತು ಜೀವನದಲ್ಲಿ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಆದುದರಿಂದ ಐಶ್ವರ್ಯ ಗಳಿಸಲು ಸಾಕಷ್ಟು ಪ್ರಯತ್ನ ಮಾಡುವನು. ಹಣಕ್ಕೆ ಮಹತ್ವವಿದೆ ಎಂಬುದಕ್ಕೆ ವಿಶ್ವದ ದೊಡ್ಡಣ್ಣನೆಂದೇ ಹೆಸರಾಗಿರುವ ಅಮೇರಿಕಾ ದೇಶ ನೋಡಿ. ಹೇಗೆ ದೇಶಗಳು ಅದರ ಮುಂದೆ ಸಾಲಕ್ಕಾಗಿ ನಿಂತಿರುತ್ತವೆ. ಇಡೀ ಜಗತ್ತನ್ನು ಹೇಗೆ ಆಟವಾಡಿಸುತ್ತಿದೆ. ಹಣದ ಮಹಿಮೆ ಕುರಿತು ಮಹಾತ್ಮರೂ ಚಿಂತನೆ ಮಾಡಿದ್ದಾರೆ.
ಹಣವೆ ನಿನ್ನಯ ಗುಣವೇನು ಬಣ್ಣಿಸಲಿ|
‘ಹಣವಿಲ್ಲದವನೊಬ್ಬ ಹೆಣಕೆ ಸಮ ಕಂಡೆಯಾ’||
ಎಂದು ದಾಸರು ಹಾಡಿದ್ದಾರೆ. ಜೊತೆಗೆ
‘ನೆಂಟರ ಇಷ್ಟರ ಕರೆಸೋದು ರೊಕ್ಕ|
ಒಂಟೆ ಆನೆ ನಿಲಿಸೋದು ರೊಕ್ಕ|
ಬಂಟರನೆಲ್ಲಾ ತರಿಸೋದು ರೊಕ್ಕ||
ರೊಕ್ಕ ಎರಡಕ್ಕೂ ದುಃಖ ಕಾಣಕ್ಕ||
ಎಂದು ಎಚ್ಚರಿಕೆಯನ್ನು ದಾಸರು ನೀಡಿಹರು.
ಈ ಎಚ್ಚರ ತಪ್ಪಿದವರಿಗೆ ದುಃಖದ ಅರಿವಾಗುವುದು ಯಾವಾಗವೆಂದರೆ ಸರ್ಕಾರದ ಇ.ಡಿ. ಮತ್ತು ಐ.ಟಿ. ಇಲಾಖೆಯ ಸಿಬ್ಬಂದಿ ದಾಳಿ ಇಟ್ಟಾಗಲೆ. “ರೊಕ್ಕ ಎರಡಕ್ಕೂ ಬಹು ದುಃಖ ಕಾಣಕ್ಕ “ಎಂದು ಆಗ ಕೊರಗುವರು. ಅದಕ್ಕಾಗಿ ” ದುಗ್ಗಾಣಿ ಬಹು ಕೆಟ್ಟದಣ್ಣ” ಎಂದು ಅಂತಿಮ ತತ್ವನಿರ್ಣಯಕಾರರು ಹೇಳಿಹರು.
ಪ್ರತಿ ವರ್ಷ ಆಶ್ವೀಜ ಮಾಸದ ಧನ ತ್ರಯೋದಶಿಗೆ ನೀರು ತುಂಬುವ, ದೀಪಾರಾಧನೆ ಮತ್ತು ನರಕಚತುರ್ದಶಿಯಂದು ಅಷ್ಟವಸುಗಳ ಆವಾಹನೆ, ಬಲಿಪಾಡ್ಯಮಿಗೆ ವಿಶೇಷ ಪೂಜೆ ಮಾಡುವರು. ನೂತನ ವಿಕ್ರಮ ಶಕಾ ವರುಷ ಆರಂಭ. ಅಂದು ನೂತನ ವಸ್ತ್ರ ಧಾರಣೆ, ಸ್ನೇಹಿತರ ಮಿಲನ, ನೆಂಟರೊಡನೆ ಕಲೆತು ಸುಗ್ರಾಸ ಭೋಜನ, ಇತ್ಯಾದಿ ವಿಲಾಸ, ವೈಭವಗಳಿಗೆಲ್ಲಾ ಮೀಸಲಾದ ಹಬ್ಬವೆಂದರೆ ದೀಪಾವಳಿ. ಅಂದು ಪ್ರತಿ ಮನೆಯ ಮುಂದೆ ಸಾಲುದೀಪ ಹಚ್ಚಿಡುವರು. ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಹೆಂಗಳೆಯರು ಸ್ವಾಗತಿಸುವರು. ಮಕ್ಕಳು ಹಾಡಿ ಕುಣಿವರು. ಇನ್ನು ಹಿರಿಯರು ಬಾಳಿನಲಿ ಬೆಳಕು ಕಾಣುವಂತಾಗಲಿ ಎಂದು ಕಿರಿಯರನು ಹಾರೈಸುವರು.
ಹಳ್ಳಿ ಜನರಲಿ ಈ ಹಬ್ಬದ್ದಂತೂ ಸಂಭ್ರಮವೋ ಸಂಭ್ರಮ. ಊರಲ್ಲೆಲ್ಲಾ ದೀಪಾವಳಿಯ ಹಬ್ಬದ ದೊಡ್ಡ ಜಾಹೀರಾತು, ಫ್ಲೆಕ್ಸ್ ಹಾಕೋನು ಎಂದರೆ ಆಗಿನಕಾಲದ ತಳವಾರ. ಊರಿನ ಹಿರಿಯರ, ಗೌಡರ ಆಣತಿಯ ಮೇರೆಗೆ ಹಬ್ಬದ ಸಂಭ್ರಮಾಚಾರಣೆಯ ಮುನ್ನುಡಿಯ ಓಂಕಾರ ಬರೆಯುತ್ತಿದ್ದನು. ಅದರ ತಥಾಗಥಿತ ವಾರಸುದಾರ ಎಂದರೆ ಈತನೆ.
ಆಗ ರಾತ್ರಿ ವೇಳೆಯೊಳು ತಳವಾರನು ಕಬ್ಬಿಣದ ಚೌಟು, ಎಣ್ಣೆ ಡಬ್ಬಿ, ದೀಪಗಂಭವಿಡಿದು ಮನೆಮನೆಗೆ ಬರುತ್ತಿದ್ದನು. ಈ ಸರ್ದಾರ ಬರುವಾಗ ಒಬ್ಬನೆ ಬರದೇ ತನ್ನ ದಂಡು ದಳ ಸಮೇತ ಊರು ಕೇರಿಗೆ ಎಂಟ್ರಿ ಕೊಡುತ್ತಿದ್ದ. ಅವರು ಬಂದ್ರು ಎಂಬುದು ಕೇರಿ ಕೇರಿಗೆಲ್ಲಾ ಗೊತ್ತಾಗಲು ಬ್ರೇಕಿಂಗ್ ನ್ಯೂಸ್ ಕೊಟ್ಟಂತೆ ಮೊದಲಿಗೆ ತನ್ನ ಪಟಾಲಂ ಕಳಿಸುತ್ತಿದ್ದನು. ಆ ಶಬ್ದ, ಗದ್ದಲದಿಂದಲೇ ಮನೆ ಮನೆಗೆಲ್ಲಾ ಸುದ್ಧಿ ತಿಳಿಯುತಿತ್ತು. ಬೆಳಿಗ್ಗೆ ಮನೆಮನೆಗೆಲ್ಲಾ ತಂಗಟೆ ಹೂವ್ವನು (ಬಂಗಾರ ಬಣ್ಣ) ಓಲಿಗ್ಗಾ.. ಓಲಿಗ್ಗಾ… ಎಂದು ಹೂವು ಚೆಲ್ಲುವನು. ನಂತ್ರ ರಾತ್ರಿ ಹಾಡುತ್ತಾ, ಮಕ್ಕಳನ್ನು ಕುಣಿಸುತ್ತಾ, ತಣಿಸುತ್ತಾ, ದೀಪಗಂಭದೊಂದಿಗೆ ತಲೆಕೊಪ್ಪೆ ಧರಿಸಿ ಆತ ಬರುತ್ತಿದ್ದನು.
ಬರುವಾಗ ಒಂದು ದೀಪಾವಳಿ ಹಾಡು ಎಂದರೆ
“ಆವೋ ಅಲ್ಲಾರೆ, ಗ್ವಾಡೆ ಬಿದ್ರೆ ಜಲ್ಲಾರೆ |
ಆ ಮನೆಗಿಂತ ಈ ಮನೆ ಉದ್ದ |
ನೆರಮನೆ ಅಜ್ಜಿ ಹಲ್ಲುಜ್ಜೋ…
ಮುಂತಾಗಿ ಹಾಡೊಂದ ಹಾಡುತ ‘ಜೋಗಿ’ ಎಂಟ್ರಿ ಕೊಟ್ಟಂತೆ ಎಂಟ್ರಿಯಾಗುತ್ತಿದ್ದನು. ಕೆಲವು ಮನೆಯ ಕಾಂಪೌಂಡೊಳಗೆ ಆರ್ಮುಗಂ ಕೋಟೆಯೇ ಇರೋದು. ಅದರ ಸುತ್ತ ನಾಯಿಗಳ ಭದ್ರವಾದ ಕಾವಲು ಇರೋದು.
ಆದರೂ ಅಂಥಹ ಆರ್ಮುಗಂ ಕೋಟೆಯನ್ನು ಭೇದಿಸುವ ನುಗ್ಗುವ ತಾಕತ್ತು ಆತನಿಗೂ ಮತ್ತು ಆತನ ಸೈನ್ಯಕ್ಕಿತ್ತು. ಆರಂಭದಲ್ಲಿ ಇಬ್ಬರೂ ಮೂವರೊಡನೆ ಹೊರಟ ಪ್ರಭಾತ್ ಪೇರಿ ಕೊನೆಗೆ ದೊಡ್ಡ ಫಟಾಲಂ ಗುಂಪೆ ಆಗಿರೋದು. ಮನೆಯ ಮಹಿಳೆಯರು ಎಣ್ಣೆ, ಬತ್ತಿ, ಎಲೆ ಅಡಿಕೆ, ದಕ್ಷಿಣೆಯನು ಕೊಡುತ್ತಿದ್ದರು. ಆಗ ಈ ಹಾಡು ಮುಂದುವರಿಯುತ್ತಿತ್ತು. ನೆಂಟರ ಮನೆ ಮುಂದೆ ಹಾಡು ಜೋರು ಇರುತ್ತಿತ್ತು.
ಆಗ ನನಗೆ ಹಾಡು ಪೂರ್ಣ ಬರುತಿತ್ತು. ಈಗ ಮರೆತೋಗಿದೆ. ಕಾರಣ ಈಗ ಬರೀ ಟಿವಿ, ಮೊಬೈಲ್, ಕ್ರಿಕೆಟ್ ಹಾವಳಿ. ಈಗೆಲ್ಲಾ ಸರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು ಎಂಬ ಹಾಡು ಹೆಚ್ಚಾಗಿದೆ. ಪರಿಣಾಮ ಯುವ ಪೀಳಿಗೆಯು “ಅಮ್ಮ ಲೂಸ್, ಅಪ್ಪಾ ಲೂಸ್ ಎಂಬಂತ ಸುಪ್ರಭಾತ ಹೇಳುತಿಹರು. ಹಳ್ಳಿ-ಹಳ್ಳಿಗಳಲ್ಲಿ ಹೆಚ್ಚಾಗಿ ಮಾರ್ದನಿಸುತ್ತಿವೆ. ಊರು ಒಂದು ರೀತ ಿ ಬರೀ ವೃದ್ಧರ ಆಶ್ರಮದಂತಾಗಿದೆ.
ಹಬ್ಬದ ದಿನ ರೈತರು ಎತ್ತುಗಳ ಮೈತೊಳೆದು, ಬಣ್ಣ ಹಚ್ಚಿ, ಗುಮ್ಮಟ, ಜೂಲನಿಂದ ಶೃಂಗರಿಸಿ, ವಾದ್ಯ ಸುಮೇಳದೊಂದಿಗೆ ಮೆರವಣಿಗೆಯಲಿ ಸಾಗಿ, ಊರಿನ ಸಮೀಪದ ಈಡು ಸುಡುವ ಸ್ಥಳಕೆ ವೈಭವದಿಂದ ಬರುತ್ತಿದ್ದರು. ಹಸಿರು ಗಿಡವೊಂದರಡಿ ಬೆನವನಿಟ್ಟು ಪೂಜಿಸುತ್ತಿದ್ದರು. ಈ ಸಂಭ್ರಮ ನೋಡಲು ಊರ ಜನವೇ ಸೇರುತ್ತಿತ್ತು. ಯುವಕರು ಪಟಾಕಿ ಸಿಡಿಸಿ, ಹಾಡಿ, ಕುಣಿದು ಕುಪ್ಪಳಿಸುತ್ತಿದ್ದರು. ನಡುರಾತ್ರಿ ವೇಳೆಗೆ ಈಡು ಸುಡುತ್ತಿದ್ದರು. ಎತ್ತುಗಳನ್ನು ಸುತ್ತರಿಸಿ ಕುಣಿದು ವಾಪಾಸಾಗುವದು ಆಗ ಮಾಮೂಲಾಗಿತ್ತು.
ಊರ ಜನರಲಿ ಕೆಲವೊಮ್ಮೆ ಆಕಸ್ಮಿಕವಾಗಿ ನುಸುಳಿದಂತ ಜಗಳಗಳು, ವೈಮನಸ್ಸು, ಭೇದಭಾವ, ತಂಟೆ ತಕರಾರು ತೊಲಗಿ ಹೊಂದಾಣಿಕೆ ತರುವ ಅಂಗವಾಗಿ ಹಬ್ಬಗಳು, ಆಚರಣೆಗಳು ಮಹತ್ವ ಪಡೆದಿದ್ದವು. ಆದರೆ, ಈಗ ಧಾರಾವಾಹಿ, ಮೊಬೈಲು, ಮುಂತಾದವು ಬಂದು ಹಬ್ಬಗಳು ತಮ್ಮ ಸ್ವರೂಪವನ್ನು ಕಳೆದುಕೊಂಡಿವೆ. ಈಗ ಊರುಗಳಲ್ಲಿ ಎತ್ತುಗಳೇ ಕಡಿಮೆಯಾಗಿವೆ. ಹಾಗಾಗಿ ಸಂಭ್ರಮವು ಕಳೆಗುಂದಿದೆ.
ಭಾರತ ದೇಶ ವಿವಿಧ ಜಾತಿ, ಧರ್ಮಗಳ ತವರೂರು. ಸಾವಿರಾರು ಜಾತಿ, ಹತ್ತಾರು ಧರ್ಮಗಳ ಬೀಡು. ಜೊತೆಗೆ ಆಸ್ತಿಕರ ದೇಶ. ದೇಶದಲ್ಲಿ ಹಬ್ಬಗಳಿಗೆ ಕೊರತೆಯೇ ಇಲ್ಲ. ಈ ಹಬ್ಬಗಳು ಇಲ್ಲಿನ ಜನ ಸೌಹಾರ್ದ, ನೆಮ್ಮದಿ ಜೀವನಕ್ಕೆ ಸಹಕಾರಿ ಆಗಿವೆ.
ಹಿಂದೂ ಹಬ್ಬಗಳ ಅರ್ಥ, ಮಹತ್ವ, ಅದರಲ್ಲಿರುವ ಶ್ರೇಷ್ಠತಮ ಭಾವನೆಗಳು ಜನರ ಮನ, ಮನೆ, ಪ್ರಪಂಚವೆಲ್ಲಾ ತುಂಬಲಿ. ದುಷ್ಟ ಭಾವನೆಗಳು ದೂರವಾಗಲಿ. ಎಲ್ಲಾ ಕಡೆಗಳಿಂದ ಉತ್ಕೃಷ್ಟ ಭಾವನೆಗಳು ಹರಿದು ಬರಲಿ. ಇಂಥಹ ಮಹೋನ್ನತ ಆಶಯವುಳ್ಳ ದೀಪಾವಳಿ ಹಬ್ಬವು ಎಲ್ಲರಲ್ಲೂ ಸಂತಸ ಮೂಡಿಸಲಿ.ಬೇಗ ಕೊರೊನಾ ಆತಂಕವು ಮರೆಯಾಗಲಿ, ಈ ಬೆಳಕಿನ ಹಬ್ಬ ಎಲ್ಲರಿಗೂ ಶುಭ ತರಲಿ.