ದೀಪಾವಳಿ ವಿಶೇಷ ಲೇಖನ
ಲೇಖಕರು : ಜೆ.ಅರುಣ್ ಕುಮಾರ್
ಪಂಡರಹಳ್ಳಿ, 9632297143
ಹಬ್ಬಗಳ ಸೊಬಗು, ಆಚರಣೆ ಒಂದೊಂದು ಪ್ರದೇಶಕ್ಕೆ ವಿಭಿನ್ನ. ಅದರಲ್ಲೂ ಬೆಳಕಿನ ಹಬ್ಬ ದೀಪಾವಳಿಯಂತೂ ಇನ್ನೂ ವೈವಿಧ್ಯತೆ ಪ್ರದೇಶದಿಂದ ಪ್ರದೇಶಕ್ಕೆ ಪಡೆದುಕೊಂಡಿದೆ.
ಕೃಷಿ, ಶ್ರಮಿಕರು ದೀಪಾವಳಿ ಹಬ್ಬವನ್ನು ತಮ್ಮ ಕಾಯಕ ವೃತ್ತಿಗೆ ಸಹಾಯಕವಾಗುವ ರೀತಿ ಆಚರಿಸಿಕೊಂಡು ಬರುತ್ತಿದ್ದಾರೆ. ಜೊತೆಗೆ ತನ್ನ ಬದುಕಿಗೆ ಆಸರೆ ಆಗಿರುವ ಭೂತಾಯಿ, ಬೆಳೆ, ಜಾನುವಾರುಗಳನ್ನು ದೀಪಾವಳಿ ಹಬ್ಬದಲ್ಲಿ ವಿಶೇಷವಾಗಿ ಆರಾಧಿಸುತ್ತಾರೆ, ಪೂಜಿಸುತ್ತಾರೆ. ಮಲೆನಾಡು ಪ್ರದೇಶದಲ್ಲಿ ಗದ್ದೆ, ಜಮೀನುಗಳಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ, ದೀಪದ ಹಬ್ಬವನ್ನು ಆಚರಿಸುತ್ತಾರೆ.
ಇನ್ನೂ ಬಯಲಸೀಮೆ ಪ್ರದೇಶದಲ್ಲಿ 30-40 ಕಿಮೀ ವ್ಯಾಪ್ತಿ, ವಿವಿಧ ಜಾತಿ ಜನರು ವಿಭಿನ್ನವಾಗಿ ಆಚರಿಸುತ್ತಾರೆ. ಅದರಲ್ಲೂ ಹಳ್ಳಿ ಪ್ರದೇಶದಲ್ಲಿ ಜಾನುವಾರುಗಳಿಗೆ ಕಿಚ್ಚು ಹಾಯಿಸುವುದು (ಬೆಂಕಿ ಹಚ್ಚಿ, ಅದರ ಮೇಲೆ ಜಾನುವಾರುಗಳನ್ನು ಹಾರಿಸುವುದು) ಮಾಡುತ್ತಾರೆ. ಇದರಿಂದ ಜಾನುವಾರುಗಳ ಚರ್ಮ ರೋಗ, ಮೈಮೇಲೆ ಹುಣ್ಣೆ ಸೇರಿದಂತೆ ವಿವಿಧ ರೀತಿ ಕೀಟಗಳು ಸಾಯುತ್ತವೆ ಎಂಬುದು ಹಿರಿಯರ ಅನುಭವದ ಮಾತು. ಜಾನುವಾರುಗಳಿಗೆ ಸ್ನಾನ ಮಾಡಿಸಿ, ಕಿಚ್ಚು ಹಾಯಿಸಿದ ನಂತರ ದೇವಸ್ಥಾನ ಸುತ್ತುವರಿಸಿ, ಬಳಿಕ ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿ, ಎಡೆ ಅರ್ಪಿಸಿ ಭಕ್ತಿ ಸಮರ್ಪಿಸುತ್ತಾರೆ. ಬಳಿಕ ಕುಟುಂಬದ ಸದಸ್ಯರೆಲ್ಲರೂ ಒಟ್ಟುಗೂಡಿ ಸಿಹಿಯೂಟ ಸವಿಯುತ್ತಾರೆ.
ಎಲ್ಲ ಜಾತಿ ಸಮುದಾಯದವರು ಕೂಡ ವಿವಿಧ ರೀತಿ ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಬಹುತೇಕ ಜನರು ತಮ್ಮ ಹಿರಿಯರನ್ನು ಸ್ಮರಿಸುವುದು (ಹಿರಿಯರ ಹಬ್ಬ) ವಿಶೇಷ.
ಅದರಲ್ಲೂ ಲಂಬಾಣಿ ಅಥವಾ ಬಂಜಾರ ಸಮುದಾಯದ ತಾಂಡಾಗಳತ್ತ ಅಲ್ಲಿ ಪ್ರತಿ ಹಬ್ಬವು ವಿಶೇಷ. ನಾನಾ ಕೊರತೆಯ ನಡುವೆಯೂ ಅಲ್ಲಿ ಹುರುಪಿನ ಮನಸ್ಸುಗಳು ನಮ್ಮನ್ನು ಮೂಕರನ್ನಾಗಿಸುತ್ತವೆ. ಹಬ್ಬಕ್ಕೆ ಸಂಭ್ರಮ-ಸಡಗರದ ತಯಾರಿ ನಡೆಯುತ್ತದೆ.
ವಿಶೇಷ ಶೈಲಿಯ ವಿನ್ಯಾಸದಿಂದ ಕೂಡಿದ ಉಡುಗೆ, ಸಾಂಸ್ಕøತಿಕ ಪರಂಪರೆ ಹೊಂದಿರುವ ಸಂಸ್ಕøತಿಯ ಜೊತೆಯಲ್ಲಿ-ಸೌಹಾರ್ದತೆಯನ್ನು ಮೂಡಿಸುವ ಹಲವಾರು ಹಬ್ಬಗಳನ್ನು ಲಂಬಾಣಿಗರು ಆಚರಿಸುತ್ತಾ ಬರುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ದೀಪಾವಳಿ ಹಬ್ಬದ ವೇಳೆ ತೀಜ್ ಹಬ್ಬ (ಗೋಧಿ ಹಬ್ಬ) ವನ್ನು ತುಂಬಾ ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದಾರೆ.
ಈ “ತೀಜ್” ಹಬ್ಬವನ್ನು ಕೆಲವು ಕಡೆ ಯುಗಾದಿ ಹಬ್ಬದ ನಂತರ ಆಚರಿಸಿದರೆ, ಇನ್ನೂ ಕೆಲವೆಡೆ ಮಹಾನವಮಿಯ ಸಂದರ್ಭದಲ್ಲಿ ಶ್ರಾವಣ ಇಲ್ಲವೆ ಭಾದ್ರಪದ ಮಾಸಗಳಲ್ಲಿಯೂ ಆಚರಿಸುತ್ತಾರೆ. ನರ್ತನ ಹಾಗೂ ಹಾಡುಗಳನ್ನು ಒಳಗೊಂಡ ಸಂಭ್ರಮ ಈ ಹಬ್ಬದಲ್ಲಿರುತ್ತವೆ. ‘ಕೋರ್’ (ಮದುವೆ ಆಗಿದ ಕನ್ಯೆಯರು) ಹುಡುಗಿಯರಿಗೆ ವಿಶೇಷ ಪ್ರಾಧಾನ್ಯತೆ ಇರುತ್ತದೆ.
ಈ ಹಬ್ಬದಲ್ಲಿ ಯುವತಿಯರು ಅದರಲ್ಲಿಯೂ ಆ ವರ್ಷದಲ್ಲಿ ಮದುವೆಯಾಗಿ ಹೋಗುವವರು ಉತ್ಸಾಹಿತರಾಗಿ ಪಾಲ್ಗೊಳ್ಳುತ್ತಾರೆ. ಭೂಮಿ ತಾಯಿಗೆ ಹಾಗೂ ಕುಲ ದೈವರಾದ ಶ್ರೀ ಸೇವಾಲಾಲ್ರ ಪ್ರಾರ್ಥನೆಯೊಂದಿಗೆ ಈ ಹಬ್ಬವು ಪ್ರಾರಂಭಗೊಂಡು ಚಿಕ್ಕ-ಚಿಕ್ಕ ಬಿದಿರಿನ ಬುಟ್ಟಿಗಳಲ್ಲಿ ಮಣ್ಣನ್ನು ಹಾಕಿ, ನಂತರ ಬುಟ್ಟಿಗಳಲ್ಲಿ ಗೋಧಿಯ ಧಾನ್ಯಗಳನ್ನು ಹಾಕಲಾಗುತ್ತದೆ. ಅವು ಮೊಳಕೆಯೊಡೆದ ನಂತರ ನಿಗದಿತ ದಿನದಂದು ಸಾಂಪ್ರದಾಯಿಕ ದೇವರ ಹಾಡುಗಳು ಭಜನೆಯೊಂದಿಗೆ-ಜಾಗರಣೆ ನಡೆಯುತ್ತದೆ. ಮರುದಿನ ಆ ಸಸಿಗಳಿಗೆ ದೇವಸ್ಥಾನದಲ್ಲಿ ಸಾಮೂಹಿಕ ಪೂಜೆ ಸಲ್ಲಿಸಲಾಗುತ್ತದೆ. ವಿವಾಹವಾದ ಯುವತಿಯರೆ ಈ ಪೂಜೆ ನಡೆಸುತ್ತಾರೆ.
ಬಳಿಕ ನಗಾರಿ, ಡೊಳ್ಳುಗಳ ನಾದ-ಹಾಡುಗಳೊಂದಿಗೆ ಮೆರವಣಿಗೆಯನ್ನು ಮಾಡಿ, ತಾಂಡಾದ ಹಿರಿಯರೆಲ್ಲರೂ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಎಲ್ಲರೂ ಪರಸ್ಪರ ಸಸಿಗಳನ್ನು ವಿನಿಮಯ ಮಾಡಿಕೊಂಡು ಶುಭ ಕೋರುತ್ತಾರೆ. “ಸರ್ವರ ಬದುಕು ಬಂಗಾರವಾಗಲಿ” ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸುವುದೇ ಈ ಹಬ್ಬದ ಮುಖ್ಯ ಉದ್ದೇಶ.
ಉತ್ತಮ ಮಳೆಯಾಗಿ ಸರಿಯಾದ ಬೆಳೆ ಸಿಗಲಿ, ಗ್ರಾಮೀಣ ಜನರ ಬದುಕು ಸಮೃದ್ಧವಾಗಲಿ ಎಂದು ಪ್ರಾರ್ಥಿಸಲು ತಾಂಡಾದ ಎಲ್ಲ ಜನ ಈ ಹಬ್ಬದಲ್ಲಿ ಭಾಗವಹಿಸುತ್ತಾರೆ. ಇದರಿಂದ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಹಾಗೂ ಬಾಂಧವ್ಯವನ್ನು ವೃದ್ಧಿಸುತ್ತವೆ ಎಂಬ ನಂಬಿಕೆ ತಾಂಡಾದ ಜನರಲ್ಲಿದೆ.
ಜೆ.ಅರುಣ್ ಕುಮಾರ್
ಪಂಡರಹಳ್ಳಿ, 9632297143